ಐದು ವರ್ಷಗಳಲ್ಲಿ 13.5 ಕೋ. ಭಾರತೀಯರು ಕಡುಬಡತನದಿಂದ ಹೊರಬಂದಿದ್ದಾರೆ: ನೀತಿ ಆಯೋಗದ ವರದಿ
ಹೊಸದಿಲ್ಲಿ: 2015-16 ಮತ್ತು 2019-21ರ ನಡುವಿನ ಐದು ವರ್ಷಗಳ ಅವಧಿಯಲ್ಲಿ 13.5 ಕೋಟಿ ಭಾರತೀಯರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದು,ಈ ನಿಟ್ಟಿನಲ್ಲಿ ಉತ್ತರ ಪ್ರದೇಶ,ಬಿಹಾರ,ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನ ಅತ್ಯಂತ ವೇಗದ ಪ್ರಗತಿಯನ್ನು ಸಾಧಿಸಿವೆ ಎಂದು ನೀತಿ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ.
‘ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ: ಪ್ರಗತಿಯ ಪುನರ್ಪರಿಶೀಲನೆ 2023’ ವರದಿಯನ್ನು ನೀತಿ ಆಯೋಗ ಉಪಾಧ್ಯಕ್ಷ ಸುಮನ್ ಬೇರಿ ಅವರು ಸೋಮವಾರ ಬಿಡುಗಡೆಗೊಳಿಸಿದರು.
ಭಾರತದಲ್ಲಿ 2015-16ರಲ್ಲಿ ಶೇ.24.85ರಷ್ಟಿದ್ದ ಕಡುಬಡವರ ಸಂಖ್ಯೆ 2019-21ರಲ್ಲಿ ಶೇ.14.96ಕ್ಕೆ ತಗ್ಗಿದ್ದು,ಶೇ.9.89ರಷ್ಟು ಗಣನೀಯ ಇಳಿಕೆಯು ದಾಖಲಾಗಿದೆ ಎಂದು ವರದಿಯು ಹೇಳಿದೆ.
ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ (MPI)ವು ಸುಸ್ಥಿರ ಅಭಿವೃದ್ಧಿ ಗುರಿಯೊಂದಿಗೆ ಸಮನ್ವಯಗೊಂಡಿರುವ 12 ಸೂಚಕಗಳು ಪ್ರತಿನಿಧಿಸುವ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟದ ಆಯಾಮಗಳಲ್ಲಿಯ ಏಕಕಾಲಿಕ ಕೊರತೆಯನ್ನು ಅಳೆಯುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಡತನವು ಅತ್ಯಂತ ವೇಗವಾಗಿ ಕಡಿಮೆಯಾಗಿದೆ. ಅಲ್ಲಿ ಕಡುಬಡವರ ಸಂಖ್ಯೆ ಶೇ.32.59ರಿಂದ ಶೇ.19.28ಕ್ಕೆ ಇಳಿಕೆಯಾಗಿದ್ದರೆ ನಗರ ಪ್ರದೇಶಗಳಲ್ಲಿ ಶೇ.8.65ರಿಂದ ಶೇ.5.27ಕ್ಕೆ ತಗ್ಗಿದೆ ಎಂದು ವರದಿಯು ಹೇಳಿದೆ.
36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 707 ಆಡಳಿತಾತ್ಮಕ ಜಿಲ್ಲೆಗಳಿಗೆ ಬಹು ಆಯಾಮಗಳ ಬಡತನದ ಅಂದಾಜನ್ನು ಒದಗಿಸಿರುವ ವರದಿಯು, ಉ.ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ಬಡವರ ಸಂಖ್ಯೆಯಲ್ಲಿ ಅತ್ಯಂತ ವೇಗದ ಇಳಿಕೆ ಕಂಡು ಬಂದಿದೆ ಎಂದು ತಿಳಿಸಿದೆ.
ಐದು ವರ್ಷಗಳಲ್ಲಿ ಎಂಪಿಐ ವೌಲ್ಯವು 0.117ರಿಂದ ಅರ್ಧಕ್ಕೆ (0.066) ಇಳಿದಿದೆ ಮತ್ತು ಬಡತನದ ತೀವ್ರತೆಯು ಶೇ.47ರಿಂದ 44ಕ್ಕೆ ತಗ್ಗಿದೆ,ತನ್ಮೂಲಕ ಕಡುಬಡತನವನ್ನು ಕನಿಷ್ಠ ಅರ್ಧಕ್ಕಿಳಿಸುವ ಗುರಿಯನ್ನು 2030ರ ನಿಗದಿತ ಗಡುವಿನ ಮೊದಲೇ ಸಾಧಿಸುವುದನ್ನು ಭಾರತಕ್ಕೆ ಸಾಧ್ಯವಾಗಲಿದೆ ಎಂದು ವರದಿಯು ಹೇಳಿದೆ.
ನೈರ್ಮಲ್ಯ,ಪೋಷಕಾಂಶ,ಅಡುಗೆ ಇಂಧನ,ಆರ್ಥಿಕ ಸೇರ್ಪಡೆ,ಕುಡಿಯುವ ನೀರು ಮತ್ತು ವಿದ್ಯುಚ್ಛಕ್ತಿಯ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಸರಕಾರವು ಗಮನವನ್ನು ಕೇಂದ್ರೀಕರಿಸಿರುವುದು ಈ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ ಎಂದು ನೀತಿ ಆಯೋಗವು ತಿಳಿಸಿದೆ.
ಎಂಪಿಐನ ಎಲ್ಲ 12 ಸೂಚಕಗಳು ಗಮನಾರ್ಹ ಸುಧಾರಣೆಯನ್ನು ತೋರಿಸಿವೆ ಎಂದು ಅದು ಹೇಳಿದೆ.