ಮಧ್ಯ ಪ್ರದೇಶ: ಕಣಿವೆಗೆ ಉರುಳಿ ಬಿದ್ದ ಪಿಕಪ್ ವಾಹನ 14 ಮಂದಿ ಮೃತ್ಯು, ಹಲವರಿಗೆ ಗಾಯ
ದಿಂಡೋರಿ (ಮಧ್ಯ ಪ್ರದೇಶ): ಪಿಕಪ್ ವಾಹನವೊಂದು ಆಳವಾದ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ ಪಕ್ಷ 14 ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕತ್ತಲಲ್ಲಿ ತಿರುವು ತೆಗೆದುಕೊಳ್ಳಲು ಯತ್ನಿಸಿದ ಚಾಲಕನು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅಪಘಾತವು ಮುಂಜಾನೆ 1.30ರ ವೇಳೆಗೆ ಬದ್ಝರ್ ಘಾಟ್ ಬಳಿ ನಡೆದಿದೆ.
ಈ ಸಂದರ್ಭದಲ್ಲಿ 40-50 ಅಡಿ ಆಳದ ಕಂದಕಕ್ಕೆ ವಾಹನವು ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಸ್ಥಳದಲ್ಲೇ 14 ಮಂದಿ ಮೃತಪಟ್ಟಿದ್ದರೆ, 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರ ಪೈಕಿ ಏಳು ಮಂದಿ ಪುರುಷರು, ಆರು ಮಂದಿ ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತರು ಶಾಹಪುರ ಜಿಲ್ಲೆಯ ಮಸೂರ್ ಘುಗ್ರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅಮ್ಹೈ ದೇವ್ರಿಗೆ ಮರಳುತ್ತಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಅವಿಂದ್ರ ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ರೂ. 4 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಘೋಷಿಸಿದ್ದಾರೆ.