ಪಶ್ಚಿಮ ಬಂಗಾಳದಲ್ಲಿ ಪ್ರಧಾನಿಯಿಂದ 15,000 ಕೋಟಿ ರೂ. ವೆಚ್ಚದ ಯೋಜನೆಗಳ ಲೋಕಾರ್ಪಣೆ
ಕೃಷ್ಣನಗರ್: ಪ್ರಧಾನಿ ನರೇಂದ್ರ ಮೋದಿ ಅವರು 15,000 ಕೋ.ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಪಶ್ಚಿಮಬಂಗಾಳದಲ್ಲಿ ಶನಿವಾರ ಅನಾವರಣಗೊಳಿಸಿದರು.
ನಾಡಿಯಾ ಜಿಲ್ಲೆಯ ಕೃಷ್ಣನಗರ್ ಜಿಲ್ಲೆಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಯೋಜನೆಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮಬಂಗಾಳವನ್ನು ಅಭಿವೃದ್ಧಿ ಹೊಂದಿದೆ ರಾಜ್ಯವನ್ನಾಗಿಸುವ ಗುರಿಯನ್ನು ಈ ಯೋಜನೆಗಳು ಹೊಂದಿವೆ ಎಂದರು.
‘‘ಈ ಯೋಜನೆಗಳು ಪಶ್ಚಿಮಬಂಗಾಳದ ಬೆಳವಣಿಗೆಗೆ ಚಾಲನೆ ನೀಡಲಿವೆ ಹಾಗೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿವೆ’’ ಎಂದು ಅವರು ಹೇಳಿದರು.
ಪುರುಲಿಯಾ ಜಿಲ್ಲೆಯಲ್ಲಿರುವ ದಾಮೋದರ್ ವ್ಯಾಲಿ ಕಾರ್ಪೋರೇಶನ್ ನ ರಘುನಾಥ್ಪುರ ಥರ್ಮಲ್ ಪವರ್ ಸ್ಟೇಷನ್ ಫೇಸ್ 2ಕ್ಕೆ ಪ್ರಧಾನಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.
650 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿಗೊಳಿಸಲಾದ ಮೆಜಿಯಾ ಥರ್ಮಲ್ ಪವರ್ ಸ್ಟೇಷನ್ ನಲ್ಲಿ ಎಫ್ಜಿಡಿ ವ್ಯವಸ್ಥೆಯನ್ನು ಅವರು ಉದ್ಘಾಟಿಸಿದರು. 1,986 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ರಾಷ್ಟ್ರೀಯ ಹೆದ್ದಾರಿ 12ರ 100 ಕಿ.ಮೀ. ಉದ್ದದ ಫರಾಖ್-ರಾಯ್ಗಂಜ್ ಸೆಕ್ಷನ್ನ ನಾಲ್ಕು ರಸ್ತೆಗಳನ್ನು ಅವರು ಉದ್ಘಾಟಿಸಿದರು.
ರಾಜ್ಯದಲ್ಲಿ 940 ಕೋ.ರೂ.ಗೂ ಅಧಿಕ ವೆಚ್ಚ 4 ರೈಲು ಯೋಜನೆಗಳನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಅರ್ಪಿಸಿದರು.