ಎರಡು ವಾರಗಳ ಹಿಂದಷ್ಟೆ ಅಮೆರಿಕಾಗೆ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2024-01-16 09:49 GMT

ಸಾಂದರ್ಭಿಕ ಚಿತ್ರ 

ಅಮರಾವತಿ/ಹೈದರಾಬಾದ್: ತೆಲಂಗಾಣದ ವಾನಪರ್ತಿ ಹಾಗೂ ಆಂಧ್ರಪ್ರದೇಶದ ಶ‍್ರೀಕಾಕುಳಂನ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗೆ ಅಮೆರಿಕಾದ ತಮ್ಮ ಕನೆಕ್ಟಿಕಟ್ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸೋಮವಾರ ಕುಟುಂಬದ ಸದಸ್ಯರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತ ವಿದ್ಯಾರ್ಥಿಗಳನ್ನು ತೆಲಂಗಾಣದ ವಾನಪರ್ತಿಯ ಜಿ.ದಿನೇಶ್ (22) ಹಾಗೂ ಆಂಧ್ರಪ್ರದೇಶದ ಶ‍್ರೀಕಾಕುಳಂನ ನಿಕೇಶ್ (21) ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿಗಳ ಸಾವಿಗೆ ಕಾರಣವೇನು ಎಂಬ ಕುರಿತು ವಿದ್ಯಾರ್ಥಿಯ ಕುಟುಂಬದ ಸದಸ್ಯರಿಗೆ ಯಾವುದೇ ಸುಳಿವು ದೊರೆತಿಲ್ಲ.

“ದಿನೇಶ್ ಕೊಠಡಿಯ ಬಳಿಯೇ ವಾಸಿಸುತ್ತಿರುವ ಆತನ ಗೆಳೆಯರು ಶನಿವಾರ ನಮಗೆ ಕರೆ ಮಾಡಿ, ಆತ ಮತ್ತು ಆತನ ಸ್ನೇಹಿತನ ಸಾವಿನ ಕುರಿತು ಮಾಹಿತಿ ನೀಡಿದರು. ಆತ ಹೇಗೆ ಮೃತಪಟ್ಟ ಎಂಬ ಬಗ್ಗೆ ನಮಗೆ ಯಾವುದೇ ಸುಳಿವಿಲ್ಲ” ಎಂದು ದಿನೇಶ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ದಿನೇಶ್ ಕುಟುಂಬದ ಸದಸ್ಯರೊಬ್ಬರ ಪ್ರಕಾರ, ಡಿಸೆಂಬರ್ 29, 2023ರಂದು ಅಮೆರಿಕಾದ ಕನೆಕ್ಟಟ್ ನಲ್ಲಿರುವ ಹಾರ್ಟ್ ಫೋರ್ಡ್ ಗೆ ಉನ್ನತ ವ್ಯಾಸಂಗಕ್ಕಾಗಿ ದಿನೇಶ್ ತೆರಳಿದ್ದ. ಕೆಲ ದಿನಗಳ ನಂತರ ನಿಕೇಶ್ ಕೂಡಾ ಅಲ್ಲಿಗೆ ತಲುಪಿದ್ದ ಎಂದು ಹೇಳಲಾಗಿದೆ.

ಈ ನಡುವೆ, ದಿನೇಶ್ ಹಾಗೂ ನಿಕೇಶ್ ಸಾವಿನ ಕುರಿತು ವಾನಪರ್ತಿ ಜಿಲ್ಲಾಡಳಿತಕ್ಕಾಗಲಿ ಅಥವಾ ಶ‍್ರೀಕಾಕುಳಂ ಜಿಲ್ಲಾಡಳಿತಕ್ಕಾಗಲಿ ಇದುವರೆಗೆ ಯಾವುದೇ ಮಾಹಿತಿ ದೊರೆತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News