ಗುಜರಾತ್: ಸಿಡಿಲು ಬಡಿದು 20 ಮಂದಿ ಮೃತ್ಯು
ಹೊಸದಿಲ್ಲಿ: ಗುಜರಾತಿನಲ್ಲಿ ರವಿವಾರ ಸುರಿದ ಅಕಾಲಿಕ ಮಳೆಯ ನಂತರ ಸಿಡಿಲು ಬಡಿದು ಹಲವಾರು ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಥಳೀಯ ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದರು.
"ಗುಜರಾತ್‌ನ ವಿವಿಧ ನಗರಗಳಲ್ಲಿ ಪ್ರತಿಕೂಲ ಹವಾಮಾನ ಮತ್ತು ಸಿಡಿಲುಗಳಿಂದಾಗಿ ಅನೇಕ ಜನರು ಸಾವನ್ನಪ್ಪಿದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟಕ್ಕೆ ನಾನು ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಸ್ಥಳೀಯ ಆಡಳಿತ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸೋಮವಾರ ಮಳೆ ಕಡಿಮೆಯಾಗುವ ನಿರೀಕ್ಷೆಯಿದೆ, ಆದರೆ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕೇಂದ್ರೀಕೃತವಾಗಿದೆ.
ಗುಜರಾತ್‌ನ 252 ತಾಲೂಕುಗಳ ಪೈಕಿ 234 ತಾಲೂಕುಗಳಲ್ಲಿ ರವಿವಾರ ಮಳೆ ದಾಖಲಾಗಿದೆ ಎಂದು ವರದಿಯಾಗಿದೆ.
ಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಭರೂಚ್ ಮತ್ತು ಅಮ್ರೇಲಿಯಂತಹ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕೇವಲ 16 ಗಂಟೆಗಳಲ್ಲಿ 50 ರಿಂದ 117 ಮಿ.ಮೀ. ಮಳೆ ಸುರಿದಿದೆ.