ಛತ್ತೀಸ್ ಗಡದ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣ : 24 ಪೊಲೀಸರಿಗೆ 10 ವರ್ಷ ಕಾರಾಗೃಹ ಶಿಕ್ಷೆ

20 PAC, CRPF jawans get 10 years jail for supplying arms and ammo to Maoists

Update: 2023-10-14 16:41 GMT

ಲಕ್ನೊ: ಛತ್ತೀಸ್ ಗಡದಲ್ಲಿ 2010ರಲ್ಲಿ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಪ್ರಕರಣದಲ್ಲಿ ಸಿ ಆರ್ ಪಿ ಎಫ್ ನ ಇಬ್ಬರು ಸಿಬ್ಬಂದಿ ಹಾಗೂ 22 ಪೊಲೀಸರು ಸೇರಿದಂತೆ 24 ಪೊಲೀಸ್ ಸಿಬ್ಬಂದಿಗೆ ಉತ್ತರಪ್ರದೇಶ ರಾಮ್ಪುರದ ವಿಶೇಷ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಪ್ರಕರಣದಲ್ಲಿ 24 ಪೊಲೀಸ್ ಸಿಬ್ಬಂದಿ ದೋಷಿಗಳು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ (ಇ.ಸಿ.ಕಾಯ್ದೆ) ವಿಜಯ್ ಕುಮಾರ್ ಗುರುವಾರ ಘೋಷಿಸಿದ್ದರು. ಇವರಲ್ಲಿ 22 ಸಿಬ್ಬಂದಿಗಳಲ್ಲಿ ಹೆಚ್ಚಿನವರು ಉತ್ತರಪ್ರದೇಶ ಪೊಲೀಸ್ ಹಾಗೂ ಪ್ರೊವಿನ್ಸಿಯಲ್ ಆರ್ಮಡ್ ಕಾನ್ಸಟೆಬ್ಯುಲರಿ (ಪಿಎಸಿ)ಗೆ ಸೇರಿದವರು. ಪ್ರಕರಣದ ಪ್ರಧಾನ ಆರೋಪಿ ಈಗಾಗಲೇ ಮೃತಪಟ್ಟಿದ್ದಾನೆ.

‘‘ನ್ಯಾಯಾಲಯ ತೀರ್ಪು ನೀಡಿದ ಬಳಿಕ ಎಲ್ಲಾ ಎಲ್ಲಾ ದೋಷಿಗಳನ್ನು ಗುರುವಾರ ಕಸ್ಟಡಿಗೆ ತೆಗೆದುಕೊಳ್ಳಲಾಯಿತು’’ ಎಂದು ರಾಮ್ಪುರ ಹೆಚ್ಚುವರಿ ಜಿಲ್ಲಾ ಸರಕಾರಿ ವಕೀಲ (ಕ್ರಿಮಿನಲ್) (ಎಡಿಸಿ) ಪ್ರತಾಪ್ ಸಿಂಗ್ ಮೌರ್ಯ ತಿಳಿಸಿದ್ದಾರೆ.

ಉತ್ತರಪ್ರದೇಶ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ಯ ಪೊಲೀಸ್ ಅಧೀಕ್ಷಕರು 2010ರಲ್ಲಿ ಲಕ್ನೊದಲ್ಲಿ ನೇಮಕಗೊಂಡ ಸಂದರ್ಭ ಈ ಘಟನೆ ಸಂಭವಿಸಿದೆ. ಛತ್ತೀಸ್ ಗಡದ ಮಾವೋವಾದಿಗಳು ಹಾಗೂ ಭಯೋತ್ಪಾದಕರಿಗೆ ರಾಮ್ಪುರದಿಂದ ಕಾಟ್ರಿಜ್, ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಪೂರೈಕೆ ಕುರಿತು ಅಲಹಾಬಾದ್ (ಈಗಿನ ಪ್ರಯಾಗ್ರಾಜ್) ಮೂಲದ ವ್ಯಕ್ತಿಯ ಮೂಲಕ ಮಾಹಿತಿ ಸ್ವೀಕರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪಿಎಸಿಯ ನಿವೃತ್ತ ಸಬ್ ಇನ್ಸ್ಪೆಕ್ಟರ್ ಯಶೋನಂದನ್, ವಿನೋದ್ ಪಾಸ್ವಾನ್ ಹಾಗೂ ವಿನೇಶ್ ಕುಮಾರ್ ಅವರನ್ನು ರಾಮ್ಪುರದಿಂದ 2010 ಎಪ್ರಿಲ್ 29ರಂದು ಬಂಧಿಸಲಾಗಿತ್ತು. ವಿನೋದ್ ಹಾಗೂ ವಿನೇಶ್ ರನ್ನು ಸಿಆರ್ ಪಿ ಎಫ್ ರಾಮ್ಪುರ ಕೇಂದ್ರಕ್ಕೆ ಹವಾಲ್ದಾರ್ ಆಗಿ ನೇಮಕ ಮಾಡಲಾಗಿತ್ತು. ಎಸ್ಟಿಎಫ್ ಇನ್ಸಾಸ್ ರೈಫಲ್ಸ್ ಹಾಗೂ ನಗದಿನೊಂದಿಗೆ ಕಾಟ್ರಿಜ್ ಗಳ ಸಂಗ್ರಹವನ್ನು ಪತ್ತೆ ಮಾಡಲಾಗಿತ್ತು.

ಎಲ್ಲಾ ಮದ್ದುಗುಂಡುಗಳು 12 ಗೋಣಿ ಚೀಲಗಳಲ್ಲಿ ಪತ್ತೆಯಾಗಿದ್ದವು. ಎಫ್ಐಆರ್ ದಾಖಲಿಸಿದ ಬಳಿಕ ಎಲ್ಲಾ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಅನಂತರ ಯಶೋನಂದನ್ ನೀಡಿದ ಮಾಹಿತಿಯಂತೆ ಇನ್ನೋರ್ವ ವ್ಯಕ್ತಿ ನಾಥಿರಾಮ್ ಸೈನಿಯನ್ನು ಮೊರದಾಬಾದ್ ನಿಂದ ಬಂಧಿಸಲಾಗಿತ್ತು ಎಂದು ಮೌರ್ಯ ತಿಳಿಸಿದ್ದಾರೆ.

ಬಂಧಿಸಲಾದ 23 ಸಿಬ್ಬಂದಿಯಲ್ಲಿ ಹೆಚ್ಚಿನವರು ಉತ್ತರಪ್ರದೇಶದ ವಿವಿಧ ಜಿಲ್ಲೆಗಳ ಶಸ್ತ್ರಾಗಾರದಲ್ಲಿ ನೇಮಕರಾಗಿದ್ದವರಾಗಿದ್ದರು. ಛತ್ತೀಸ್ ಗಡದ ದಾಂತೇವಾಡದಲ್ಲಿ 2010 ಎಪ್ರಿಲ್ ನಲ್ಲಿ ಸಿಆರ್ಪಿಎಫ್ ತುಕುಡಿಯ ಮೇಲೆ ದಾಳಿ ನಡೆಸಿದ ಮಾವೋವಾದಿಗಳಿಗೆ ಇವರು ಮದ್ದುಗುಂಡುಗಳನ್ನು ಪೂರೈಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು ಎಂದು ಮೌರ್ಯ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News