20 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಗಂಗಾ ನದಿ ನೀರು ಮಲೀನವಾಗಿದೆ ಯಾಕೆ ? ; ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಪ್ರಶ್ನೆ

Update: 2024-05-14 16:18 GMT

ನರೇಂದ್ರ ಮೋದಿ | PC :  PTI 

ಹೊಸದಿಲ್ಲಿ : ದತ್ತು ತೆಗೆದುಕೊಂಡ ವಾರಣಾಸಿ ಗ್ರಾಮಗಳನ್ನು ಕೈ ಬಿಟ್ಟಿರುವುದು ಏಕೆ ? ಹಾಗೂ 20 ಸಾವಿರ ಕೋಟಿ ರೂ. ವೆಚ್ಚ ಮಾಡಿದರೂ ಗಂಗಾ ನದಿ ಮಲೀನವಾಗಿರುವುದು ಏಕೆ ? ಎಂದು ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ದಿನವಾದ ಮಂಗಳವಾರ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ವಾರಣಾಸಿಯಲ್ಲಿ ವಿಫಲವಾಗಿರುವುದಕ್ಕೆ ನಿರ್ಗಮನ ಪ್ರಧಾನಿ ಉತ್ತರಿಸಬೇಕು ಎಂದಿದ್ದಾರೆ.

ಇಂದಿನ ಪ್ರಶ್ನೆಗಳು: 20 ಸಾವಿರ ಕೋಟಿ ರೂ. ವೆಚ್ಚ ಮಾಡಿದ ಬಳಿಕವೂ ಗಂಗಾ ನದಿ ಏಕೆ ಮಲೀನವಾಗಿದೆ ? ದತ್ತು ಪಡೆದ ವಾರಣಾಸಿಯ ಗ್ರಾಮಗಳನ್ನು ಪ್ರಧಾನಿ ಅವರು ಕೈ ಬಿಟ್ಟಿರುವುದು ಯಾಕೆ? ವಾರಣಾಸಿಯಲ್ಲಿರುವ ಮಹಾತ್ಮಾ ಗಾಂಧಿ ಅವರ ಪರಂಪರೆಯನ್ನು ನಾಶ ಮಾಡಲು ಪ್ರಧಾನಿ ಅವರು ನಿರ್ಧರಿಸಿರುವುದು ಯಾಕೆ ?ಎಂದು ಅವರು ಎಕ್ಸ್ ನ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.

2014ರಲ್ಲಿ ವಾರಣಾಸಿಗೆ ಆಗಮಿಸಿದಾಗ ಮೋದಿ ಅವರು ಮಾತೆ ಗಂಗಾ ನನ್ನನ್ನು ಇಲ್ಲಿಗೆ ಕರೆಸಿಕೊಂಡಳು ಎಂದು ಹೇಳಿದ್ದರು. ಅಲ್ಲದೆ ಗಂಗಾ ನದಿಯ ನೀರನ್ನು ಶುದ್ದೀಕರಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಅನಂತರ ಅಧಿಕಾರಕ್ಕೆ ಬಂದ ಕೂಡಲೇ ಅವರು ಈಗಿರುವ ಆಪರೇಷನ್ ಗಂಗಾವನ್ನು ನಮಾಮಿ ಗಂಗಾ ಎಂದು ಬದಲಾಯಿಸಿದ್ದರು ಎಂದು ಅವರು ಹೇಳಿದ್ದಾರೆ.

ತೆರಿಗೆದಾರರ 20 ಸಾವಿರ ಕೋಟಿ ರೂ. ಎಲ್ಲಿಗೆ ಹೋಯಿತು? ಭ್ರಷ್ಟಾಚಾರ ಹಾಗೂ ದುರಾಡಳಿತದ ಮೂಲಕ ಎಷ್ಟು ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ ? ಗಂಗಾ ಮಾತೆಗೆ ಕೂಡ ಜುಮ್ಲಾ ನೀಡಿರುವ ವ್ಯಕ್ತಿಯನ್ನು ವಾರಣಾಸಿಯ ಜನರು ನಂಬಲು ಹೇಗೆ ಸಾಧ್ಯ ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ವಾರಣಾಸಿ ನಗರದ ಹೊರವಲಯಲ್ಲಿರುವ 8 ಗ್ರಾಮಗಳನ್ನು ಪ್ರಧಾನಿ ಅವರು ದತ್ತು ತೆಗೆದುಕೊಂಡಿದ್ದಾರೆ. ಆದರೆ, ಸ್ಮಾರ್ಟ್ ಶಾಲೆ, ಆರೋಗ್ಯ ಸೌಲಭ್ಯ, ವಸತಿ ಭರವಸೆಯ ಹೊರತಾಗಿಯೂ ಈ ಗ್ರಾಮದಲ್ಲಿ ಕಳೆದ 10 ವರ್ಷಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು 2024 ಮಾರ್ಚ್ ನ ವರದಿಯಲ್ಲಿ ತಿಳಿದು ಬಂದಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News