2024ರ ‘ಫೋರ್ಬ್ಸ್’ ಜಾಗತಿಕ ಅತಿ ಶ್ರೀಮಂತರ ಪಟ್ಟಿ ಬಿಡುಗಡೆ | ಮುಕೇಶ್ ಅಂಬಾನಿ ಏಶ್ಯದ ನಂಬರ್ ವನ್ ಶ್ರೀಮಂತ
ಹೊಸದಿಲ್ಲಿ: 2024ನೇ ಸಾಲಿನ ಫೋರ್ಬ್ಸ್ ಜಾಗತಿಕ ಅತಿ ಶ್ರೀಮಂತರ ಪಟ್ಟಿಯಲ್ಲಿ 200 ಭಾರತೀಯರು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷದ 169 ಮಂದಿಗೆ ಹೋಲಿಸಿದರೆ, ಈ ವರ್ಷ ಭಾರತೀಯ ಬಿಲಿಯಾಧೀಶರ ಸಂಖ್ಯೆ ವೃದ್ಧಿಸಿದೆ.
ಈ 200 ಭಾರತೀಯ ಬಿಲಿಯಾಧೀಶರ ಒಟ್ಟು ಸಂಪತ್ತು 954 ಬಿಲಿಯ ಡಾಲರ್ (79.63 ಲಕ್ಷ ಕೋಟಿ ರೂಪಾಯಿ) ಆಗಿದ್ದು, ದಾಖಲೆಯಾಗಿದೆ. ಇದು ಕಳೆದ ವರ್ಷದ 675 ಬಿಲಿಯ ಡಾಲರ್ (56.34 ಲಕ್ಷ ಕೋಟಿ ರೂಪಾಯಿ)ಗಿಂತ 41 ಶೇಕಡ ಅಧಿಕವಾಗಿದೆ.
ಭಾರತೀಯ ಬಿಲಿಯಾಧೀಶರ ಪಟ್ಟಿಯ ಅಗ್ರ ಸ್ಥಾನದಲ್ಲಿ ರಿಲಯನ್ಸ್ ಸಮೂಹದ ಒಡೆಯ ಮುಕೇಶ್ ಅಂಬಾನಿ ಇದ್ದಾರೆ. ಅವರ ಸಂಪತ್ತು ಕಳೆದ ವರ್ಷದ 83 ಬಿಲಿಯ ಡಾಲರ್ (6.93 ಲಕ್ಷ ಕೋಟಿ ರೂಪಾಯಿ)ನಿಂದ ಈ ಬಾರಿ 116 ಬಿಲಿಯ ಡಾಲರ್ (9.68 ಲಕ್ಷ ಕೋಟಿ ರೂಪಾಯಿ)ಗೆ ಏರಿಕೆಯಾಗಿದೆ. ಇದರೊಂದಿಗೆ, 100 ಬಿಲಿಯ ಡಾಲರ್ಗಿಂತ ಹೆಚ್ಚಿನ ಸಂಪತ್ತು ಹೊಂದಿದವರ ಗುಂಪಿಗೆ ಸೇರ್ಪಡೆಗೊಂಡ ಮೊದಲ ಏಶ್ಯನ್ ಅವರಾಗಿದ್ದಾರೆ.
ಅವರು ಜಗತ್ತಿನ 12ನೇ ಅತಿ ಶ್ರೀಮಂತನ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರು ಭಾರತ ಮತ್ತು ಏಶ್ಯ ಎರಡರಲ್ಲೂ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ 84 ಬಿಲಿಯ ಡಾಲರ್ (7.01 ಲಕ್ಷ ಕೋಟಿ ರೂಪಾಯಿ) ಸಂಪತ್ತಿನೊಂದಿಗೆ ಎರಡನೇ ಅತಿ ಶ್ರೀಮಂತ ಭಾರತೀಯನಾಗಿದ್ದಾರೆ. ಅವರು ತನ್ನ ಕಳೆದ ವರ್ಷದ ಸಂಪತ್ತಿಗೆ ಈ ಬಾರಿ 36.8 ಬಿಲಿಯ ಡಾಲರ್ (3.07 ಲಕ್ಷ ಕೋಟಿ ರೂಪಾಯಿ) ಸೇರಿಸಿದ್ದಾರೆ. ಅವರು ಜಾಗತಿಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ.
ಸಾವಿತ್ರಿ ಜಿಂದಾಲ್ ಭಾರತದ ಅತಿ ಶ್ರೀಮಂತ ಮಹಿಳೆಯಾಗಿ ಮುಂದುವರಿದಿದ್ದಾರೆ. ಕಳೆದ ವರ್ಷ ಭಾರತದ ಆರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದ ಅವರು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಅವರು 33.5 ಬಿಲಿಯ ಡಾಲರ್ (2.80 ಲಕ್ಷ ಕೋಟಿ ರೂಪಾಯಿ) ಸಂಪತ್ತು ಹೊಂದಿದ್ದಾರೆ.
ಈ ಬಾರಿಯ ಪಟ್ಟಿಗೆ 25 ಹೊಸ ಭಾರತೀಯ ಬಿಲಿಯಾಧೀಶರು ಸೇರ್ಪಡೆಯಾಗಿದ್ದಾರೆ. ನರೇಶ್ ಟ್ರೆಹಾನ್, ರಮೇಶ್ ಕುಂಞಿಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಅವರ ಪೈಕಿ ಕೆಲವರು. ಅದೇ ವೇಳೆ, ಈ ಬಾರಿಯ ಬಿಲಿಯಾಧೀಶರ ಪಟ್ಟಿಯಿಂದ ಬೈಜು ರವೀಂದ್ರನ್ ಮತ್ತು ರೋಹಿಕಾ ಮಿಸ್ತ್ರಿ ಹೊರಬಿದ್ದಿದ್ದಾರೆ.
10 ಅತಿ ಶ್ರೀಮಂತ ಭಾರತೀಯರು
1. ಮುಕೇಶ್ ಅಂಬಾನಿ - 116 ಬಿಲಿಯ ಡಾಲರ್ (9.68 ಲಕ್ಷ ಕೋಟಿ ರೂ.)
2. ಗೌತಮ್ ಅದಾನಿ- 84 ಬಿಲಿಯ ಡಾಲರ್ (7.01 ಲಕ್ಷ ಕೋಟಿ ರೂ.)
3. ಶಿವ ನಾಡಾರ್- 36.9 ಬಿಲಿಯ ಡಾಲರ್ (3.08 ಲಕ್ಷ ಕೋಟಿ ರೂ.)
4. ಸಾವಿತ್ರಿ ಜಿಂದಾಲ್- 33.5 ಬಿಲಿಯ ಡಾಲರ್ (2.80 ಲಕ್ಷ ಕೋಟಿ ರೂ.)
5. ದಿಲೀಪ್ ಶಾಂಘ್ವಿ- 26.7 ಬಿಲಿಯ ಡಾಲರ್ (2.23 ಲಕ್ಷ ಕೋಟಿ ರೂ.)
6. ಸೈರಸ್ ಪೂನಾವಾಲಾ- 21.3 ಬಿಲಿಯ ಡಾಲರ್ (1.78 ಲಕ್ಷ ಕೋಟಿ ರೂ.)
7.ಕುಶಲ್ ಪಾಲ್ ಸಿಂಗ್- 20.9 ಬಿಲಿಯ ಡಾಲರ್ (1.74 ಲಕ್ಷ ಕೋಟಿ ರೂ.)
8. ಕುಮಾರ್ ಬಿರ್ಲಾ- 19.7 ಬಿಲಿಯ ಡಾಲರ್ (1.64 ಲಕ್ಷ ಕೋಟಿ ರೂ.)
9 .ರಾಧಾಕಿಶನ್ ದಮಾನಿ- 17.6 ಬಿಲಿಯ ಡಾಲರ್ (1.47 ಲಕ್ಷ ಕೋಟಿ ರೂ.)
10. ಲಕ್ಷ್ಮಿ ಮಿತ್ತಲ್- 16.4 ಬಿಲಿಯ ಡಾಲರ್ (1.37 ಲಕ್ಷ ಕೋಟಿ ರೂಪಾಯಿ)
ಜಾಗತಿಕ 10 ಅತಿ ಶ್ರೀಮಂತರು
1. ಬರ್ನಾರ್ಡ್ ಅರ್ನೊ (ಎಲ್ವಿಎಮ್ಎಚ್)- 235 ಬಿಲಿಯ ಡಾಲರ್ (19.61 ಲಕ್ಷ ಕೋಟಿ ರೂ.)
2. ಜೆಫ್ ಬೆರೆಸ್ (ಅಮೆಝಾನ್)- 194 ಬಿಲಿಯ ಡಾಲರ್ (16.19 ಲಕ್ಷ ಕೋಟಿ ರೂ.)
3. ಎಲಾನ್ ಮಸ್ಕ್ (ಟೆಸ್ಲಾ)- 193 ಬಿಲಿಯ ಡಾಲರ್ (16.10 ಲಕ್ಷ ಕೋಟಿ ರೂಪಾಯಿ)
4. ಮಾರ್ಕ್ ಝುಕರ್ಬರ್ಗ್ (ಮೆಟ)-174 ಬಿಲಿಯ ಡಾಲರ್ (14.52 ಲಕ್ಷ ಕೋಟಿ ರೂ.)
5. ಲ್ಯಾರಿ ಎಲಿಸನ್ (ಒರೇಕಲ್)- 159 ಬಿಲಿಯ ಡಾಲರ್ (13.27 ಲಕ್ಷ ಕೋಟಿ ರೂ.)
6. ವಾರನ್ ಬಫೆಟ್ (ಬರ್ಕ್ಶಯರ್ ಹಾತವೇ)- 136 ಬಿಲಿಯ ಡಾಲರ್ (11.35 ಲಕ್ಷ ಕೋಟಿ ರೂ.)
7. ಬಿಲ್ ಗೇಟ್ಸ್ (ಮೈಕ್ರೋಸಾಫ್ಟ್)- 130 ಬಿಲಿಯ ಡಾಲರ್ (10.85 ಲಕ್ಷ ಕೋಟಿ ರೂ.)
8. ಸ್ಟೀವ್ ಬಾಲ್ಮರ್ (ಮೈಕ್ರೋಸಾಫ್ಟ್)- 125 ಬಿಲಿಯ ಡಾಲರ್ (10.43 ಲಕ್ಷ ಕೋಟಿ ರೂ.)
9. ಲ್ಯಾರಿ ಪೇಜ್ (ಗೂಗಲ್)- 123 ಬಿಲಿಯ ಡಾಲರ್ (10.27 ಲಕ್ಷ ಕೋಟಿ ರೂ.)
10. ಸರ್ಗಿ ಬ್ರಿನ್ (ಗೂಗಲ್)- 118 ಬಿಲಿಯ ಡಾಲರ್ (9.84 ಲಕ್ಷ ಕೋಟಿ ರೂ.)