ರ‍್ಯಾಗಿಂಗ್‌ ನಿಂದ ಐದೂವರೆ ವರ್ಷಗಳಲ್ಲಿ 25 ವಿದ್ಯಾರ್ಥಿಗಳು ಆತ್ಮಹತ್ಯೆ: ಯುಜಿಸಿ

Update: 2023-08-18 18:29 GMT

ಹೊಸದಿಲ್ಲಿ: ರ‍್ಯಾಗಿಂಗ್‌ ಗೆ ಒಳಗಾಗಿ ಐದೂವರೆ ವರ್ಷದಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ಬಹಿರಂಗಪಡಿಸಿದೆ. ಆರ್ಟಿಐ ಕಾರ್ಯಕರ್ತ ಚಂದ್ರಶೇಖರ ಗೌರ್ ಅವರು ಸಲ್ಲಿಸಿದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಯುಜಿಸಿ, ಈ ಬಗ್ಗೆ 2018 ಜನವರಿ 1ರಿಂದ 2023 ಆಗಸ್ಟ್ 1ರ ನಡುವೆ ದೂರುಗಳು ದಾಖಲಾಗಿವೆ ಎಂದು ತಿಳಿಸಿದೆ.

ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ತಲಾ 4 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಒಡಿಶಾದಲ್ಲಿ ಮೂರು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ತೆಲಂಗಾಣದಲ್ಲಿ ತಲಾ ಎರಡು ಆತ್ಮಹತ್ಯೆ ಪ್ರಕರಣ ವರದಿಯಾಗಿವೆ. ಚತ್ತೀಸ್ಗಢ, ಹಿಮಾಚಲಪ್ರದೇಶ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮಬಂಗಾಳ ಹಾಗೂ ಪಂಜಾಬ್ ನಲ್ಲಿ ತಲಾ ಒಂದು ಆತ್ಮಹತ್ಯೆ ಪ್ರಕರಣ ವರದಿಯಾಗಿವೆ ಎಂದು ಅದು ತಿಳಿಸಿದೆ.

ತಮಿಳುನಾಡಿನ 4 ಆತ್ಮಹತ್ಯೆ ಪ್ರಕರಣಗಳಲ್ಲಿ ಚೆನ್ನೈಯಿಂದ 3, ಐಐಟಿ ಮದ್ರಾಸ್ನಿಂದ 2, ಜಯಗೋವಿಂದ ಹರಿಗೋವಿಂದ ಅಗರ್ವಾಲ್ ಅಗ್ರಸೇನ್ ಕಾಲೇಜಿನಿಂದ 1 ವರದಿಯಾಗಿವೆ. 4ನೇ ಆತ್ಮಹತ್ಯೆ ತೂತುಕ್ಕುಡಿ ಜಿಲ್ಲೆಯ ಸರಕಾರಿ ವೈದ್ಯಕೀಯ ಕಾಲೇಜಿನಿಂದ ವರದಿಯಾಗಿದೆ. ಮಹಾರಾಷ್ಟ್ರದ ಆತ್ಮಹತ್ಯೆ ಪ್ರಕರಣಗಳಲ್ಲಿ ಐಐಟಿ ಬಾಂಬೆಯಿಂದ 3, ಟೋಪಿವಾಲ ಮೆಡಿಕಲ್ ಕಾಲೇಜು ಹಾಗೂ ಎಂಜಿಎಂ ಕಾಲೇಜಿನಿಂದ ತಲಾ 2 ವರದಿಯಾಗಿದೆ.

ಈ 25ರಲ್ಲಿ 2018ರಲ್ಲಿ 8, 2019ರಲ್ಲಿ 2, 2020ರಲ್ಲಿ 2, 2022ರಲ್ಲಿ 4 ಹಾಗೂ 2023ರಲ್ಲಿ 4 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವಿದ್ಯಾರ್ಥಿಗಳಿಗಾಗಿ ರ‍್ಯಾಗಿಂಗ್‌ ತಡೆ ಹೆಲ್ಪ್ಲೈನ್ ಅನ್ನು ಯುಜಿಸಿ 44 ಗಂಟೆಗಳ ಕಾಲವೂ ನಿರ್ವಹಿಸುತ್ತಿದೆ. ಯುಜಿಸಿಯ ರ‍್ಯಾಗಿಂಗ್‌ ತಡೆ ಘಟಕ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತದೆ.

ದೂರು ಹಾಗೂ ವರದಿಗಳನ್ನು ಸಹಾಯವಾಣಿ ಮೂಲಕ ಸ್ವೀಕರಿಸಲಾಗುತ್ತದೆ ಹಾಗೂ ಸಕಾಲದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಯುಜಿಸಿ ಅಧ್ಯಕ್ಷ ಮಮಿದಾಲಾ ಜಗದೀಶ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News