ಸರಕಾರದಿಂದ ಬೆಲೆಯೇರಿಕೆ ನಿಯಂತ್ರಣಕ್ಕಾಗಿ ಮಾರುಕಟ್ಟೆಗೆ ಗೋದಿ ಬಿಡುಗಡೆಯಿಂದ ರೈತರಿಗೆ 40,000 ಕೋ.ರೂ.ನಷ್ಟ; ವರದಿ

Update: 2023-09-20 13:37 GMT

Photo: PTI

ಹೊಸದಿಲ್ಲಿ: ಬೆಲೆಏರಿಕೆಯನ್ನು ನಿಯಂತ್ರಿಸಲು ಸರಕಾರವು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಗೋದಿಯನ್ನು ಬಿಡುಗಡೆಗೊಳಿಸಿದ ಬಳಿಕ ದೇಶದಲ್ಲಿಯ ರೈತರು ಸುಮಾರು 40,000 ಕೋ.ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ ಎಂದು ಭಾರತೀಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿ (ಐಸಿಆರ್‌ಐಇಆರ್)ಯು ಅಂದಾಜಿಸಿದೆ ಎಂದು Wire.in ವರದಿ ಮಾಡಿದೆ.

ಸರಕಾರದಿಂದ ಇಂತಹ ನಿರ್ಬಂಧಕ ನೀತಿಗಳು ಮುಂಬರುವ ಸಂಗ್ರಹ ಋತುವಿನಲ್ಲಿ ಭತ್ತದ ಬೆಳೆಗಾರರು ಇಂತಹುದೇ ನಷ್ಟವನ್ನು ಎದುರಿಸುವಂತೆ ಮಾಡಬಹುದು ಎಂದು ಐಸಿಆರ್‌ಇಐಆರ್ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ಇಂತಹುದೇ ನಿರ್ಬಂಧಕ ನೀತಿಗಳು ಬೇಳೆಕಾಳುಗಳ ಬೆಳೆಗಾರರಿಗೆ ಮತ್ತು ಈಗ ಈರುಳ್ಳಿ ಬೆಳೆಗಾರರಿಗೂ ಜಾರಿಯಲ್ಲಿವೆ. ಇದು ನಿರ್ಬಂಧಕ ಕ್ರಮಗಳ ಪುನರ್‌ಪರಿಶೀಲನೆಯನ್ನು ಮತ್ತು ನಷ್ಟವನ್ನು ಅನುಭವಿಸಿರುವ ರೈತರಿಗೆ ಪರಿಹಾರ ನೀಡಿಕೆಯನ್ನು ಅಗತ್ಯವಾಗಿಸಿದೆ ಎಂದು ವರದಿಯು ಹೇಳಿದೆ.

2022-23ರಲ್ಲಿ ದೇಶದಲ್ಲಿ ಒಟ್ಟು 112 ಮಿಲಿಯನ್ ಟನ್ ಗೋದಿಯ ಉತ್ಪಾದನೆಯಾಗಿತ್ತು. 2023-24ರ ರಬಿ ಋತುವಿನಲ್ಲಿ ಪ್ರತಿ ಕ್ವಿಂಟಲ್‌ಗೆ 2125 ರೂ.ಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಲ್ಲಿ ಮತ್ತು 2,673 ರೂ.ಗಳ ಮುಕ್ತ ಮಾರುಕಟ್ಟೆ ಬೆಲೆಯಲ್ಲಿ ಗೋದಿ ಮಾರಾಟವಾಗಿತ್ತು.

ಗೋದಿ ಬೆಳೆಗಾರರು ಅನುಭವಿಸಿರುವ ನಷ್ಟಕ್ಕೆ ಕಾರಣಗಳನ್ನು ವಿವರಿಸಿರುವ ವರದಿಯು,ದೇಶಿಯ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಸರಕಾರವು ಈ ವರ್ಷದ ಫೆಬ್ರವರಿಯಲ್ಲಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್)ಯನ್ನು ಜಾರಿಗೆ ತಂದಿದ್ದು,ಪ್ರತಿ ಕ್ವಿಂಟಲ್ ಗೋದಿ ಬೆಲೆಯನ್ನು 2,350 ರೂ.ಗಳಿಗೆ ಗಣನೀಯವಾಗಿ ತಗ್ಗಿಸಿತ್ತು. ನಂತರ ಇದನ್ನು ಪ್ರತಿ ಕ್ವಿಂಟಲ್‌ಗೆ 2,150 ರೂ.ಗಳಿಗೆ ಇನ್ನಷ್ಟು ತಗ್ಗಿಸಲಾಗಿತ್ತು. ಆದಾಗ್ಯೂ ಗೋದಿಯ ಒಎಂಎಸ್‌ಎಸ್ ಬೆಲೆಗಳು ಬೆಳೆಗಾರರ ಉತ್ಪಾದನಾ ವೆಚ್ಚ (2022-2023ರಲ್ಲಿ ಪ್ರತಿ ಕ್ವಿಂಟಲ್‌ಗೆ 2,654 ರೂ.) ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿತ್ತು. ಸರಕಾರವು ಮಧ್ಯ ಪ್ರವೇಶಿಸದಿದ್ದರೆ ರೈತರು ಪ್ರತಿ ಕ್ವಿಂಟಲ್‌ಗೆ 548 ರೂ.ಗಳನ್ನು ಹೆಚ್ಚುವರಿಯಾಗಿ ಗಳಿಸುವ ಸಾಧ್ಯತೆಯಿತ್ತು. ಇದರ ಪರಿಣಾಮವಾಗಿ ರೈತರಿಗೆ ಸುಮಾರು 40,000 ಕೋ.ರೂ.ಗಳ ನಷ್ಟವುಂಟಾಗಿದೆ ಎಂದು ಹೇಳಿದೆ.

ದೇಶದಲ್ಲಿ ಬೆಲೆಏರಿಕೆಯನ್ನು ನಿಯಂತ್ರಿಸಲು ವ್ಯಾಪಾರ ನೀತಿಯನ್ನು ವಿವೇಚನೆಯಿಂದ ಬಳಸುವಂತೆ ಐಸಿಆರ್‌ಐಇಆರ್ ಸರಕಾರಕ್ಕೆ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News