2013ರಿಂದ ದಲಿತರ ವಿರುದ್ಧ ಅಪರಾಧಗಳಲ್ಲಿ ಶೇ.46.11 ಏರಿಕೆ: ಖರ್ಗೆ

Update: 2023-12-08 15:21 GMT

ಮಲ್ಲಿಕಾರ್ಜುನ ಖರ್ಗೆ | Photo :  PTI 

ಹೊಸದಿಲ್ಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (NCRB)ದ ದತ್ತಾಂಶಗಳಂತೆ 2013ರಿಂದ ದಲಿತರ ವಿರುದ್ಧ ಅಪರಾಧಗಳು ಶೇ.46.11ರಷ್ಟು ಮತ್ತು ಆದಿವಾಸಿಗಳ ವಿರುದ್ಧ ಅಪರಾಧಗಳಲ್ಲಿ ಶೇ.48.15ರಷ್ಟು ಏರಿಕೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳ ಕುರಿತು ಗ್ರಾಫಿಕ್ವೊಂದನ್ನು ಶುಕ್ರವಾರ ತನ್ನ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಖರ್ಗೆ,‘ದಲಿತರು ಮತ್ತು ಆದಿವಾಸಿಗಳ ಮೇಲಿನ ನಿರಂತರ ದಬ್ಬಾಳಿಕೆಯು ಬಿಜೆಪಿ ಮತ್ತು ಆರೆಸ್ಸೆಸ್ನ ‘ಸಬ್ ಕಾ ಸಾಥ್ ’ ಹೇಳಿಕೆಯ ಬೂಟಾಟಿಕೆಯನ್ನು ಬಯಲಿಗೆಳೆದಿದೆ ’ ಎಂದು ಟೀಕಿಸಿದ್ದಾರೆ.

ಎನ್ಸಿಆರ್ಬಿಯ ಇತ್ತೀಚಿನ ವರದಿಯು ಕೇವಲ ಅಂಕಿಅಂಶಗಳಲ್ಲ, ಅದು ಎಸ್ಸಿ/ಎಸ್ಟಿ ಸಮುದಾಯಗಳ ಬದುಕನ್ನು ಅಸುರಕ್ಷಿತವಾಗಿಸಲು ಬಿಜೆಪಿಯ ‘ಕರಾಳ ಪತ್ರ’ವಾಗಿದೆ ಎಂದು ಹೇಳಿರುವ ಖರ್ಗೆ, ಅನ್ಯಾಯ,ದೌರ್ಜನ್ಯಗಳು ಮತ್ತು ದಬ್ಬಾಳಿಕೆ ಬಿಜೆಪಿಯ ಸಮಾಜವನ್ನು ವಿಭಜಿಸುವ ದಶಕದ ಅಜೆಂಡಾದ ಭಾಗವಾಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ವಿರುದ್ಧ ಅಪರಾಧಗಳು ಮತ್ತು ದೌರ್ಜನ್ಯಗಳಲ್ಲಿ ಒಟ್ಟಾರೆ ಏರಿಕೆಯಾಗಿದೆ. ರಾಜಸ್ಥಾನ,ಮಧ್ಯಪ್ರದೇಶ, ಛತ್ತೀಸ್ಗಡ ಮತ್ತು ತೆಲಂಗಾಣದಲ್ಲಿ 2022ರಲ್ಲಿ ಇಂತಹ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ಕಳೆದ ಕೆಲವು ವರ್ಷದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ವಿರುದ್ಧ ಅತ್ಯಂತ ಹೆಚ್ಚಿನ ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿರುವ ದೇಶದ ಐದು ಅಗ್ರರಾಜ್ಯಗಳಲ್ಲಿ ಸೇರಿವೆ ಎಂದು ಎನ್ಸಿಆರ್ಬಿ ವರದಿಯು ಎತ್ತಿ ತೋರಿಸಿದೆ.

ಇಂತಹ ಅಪರಾಧಗಳು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಬಿಹಾರ,ಉತ್ತರ ಪ್ರದೇಶ,ಒಡಿಶಾ ಮತ್ತು ಪಂಜಾಬ್ ಕೂಡ ಸೇರಿವೆ. 


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News