‌ಮಧ್ಯ ಪ್ರದೇಶ| ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 6 ಮಂದಿ ಬಲಿ, 60 ಜನರಿಗೆ ಗಾಯ

Update: 2024-02-06 08:25 GMT

Photo: NDTV

ಭೋಪಾಲ್: ಮಧ್ಯ ಪ್ರದೇಶದ ಹರ್ದಾ ಎಂಬಲ್ಲಿನ ಪಟಾಕಿ ಕಾರ್ಖಾನೆಯಲಿ ಇಂದು ಸಂಭವಿಸಿದ ಅಗ್ನಿ ಅನಾಹುತದಲ್ಲಿ ಆರು ಮಂದಿ ಬಲಿಯಾಗಿದ್ದು ಸುಮಾರು 60 ಜನರು ಗಾಯಗೊಂಡಿದ್ದಾರೆ. ಈ ಬೆಂಕಿ ಅವಘಢದ ವೇಳೆ ಉಂಟಾದ ಸ್ಫೋಟಗಳು ಸುತ್ತಲಿನ ಪ್ರದೇಶಗಳ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದು NDTV ವರದಿ ಮಾಡಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಖಾನೆಯಲ್ಲಿದ್ದ ಪಟಾಕಿಗಳು ಬೆಂಕಿ ಅವಘಡದ ವೇಳೆ ಸ್ಫೋಟಿಸಿದ್ದರಿಂದ ಉಂಟಾದ ಕಂಪನಗಳು ಹತ್ತಿರದ ನರ್ಮದಾಪುರಂ ಜಿಲ್ಲೆಯ ಸಿಯೋನಿ ಮಾಲ್ವಾ ಪ್ರದೇಶದಲ್ಲೂ ಭಯ ಆವರಿಸುವಂತೆ ಮಾಡಿತ್ತು ಎಂದು ವರದಿಯಾಗಿದೆ.

ಘಟನೆಯ ವೀಡಿಯೋದಲ್ಲಿ ಕಾರ್ಖಾನೆಯಲ್ಲಿ ಉಂಟಾಗಿರುವ ಸ್ಫೋಟಗಳಿಂದ ಭಯಭೀತರಾಗಿ ಹತ್ತಿರದ ರಸ್ತೆಯಲ್ಲಿ ಜನರು ಓಡುತ್ತಿರುವುದು ಕಾಣಿಸುತ್ತದೆ.

ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನೂ ಸ್ಥಳಕ್ಕೆ ಧಾವಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಿಷಿ ಗರ್ಗ್‌ ಹೇಳಿದ್ದಾರೆ.

ಘಟನೆ ನಡೆದಾಗ ಫ್ಯಾಕ್ಟರಿಯೊಳಗೆ 150 ಕಾರ್ಮಿಕರಿದ್ದರೆಂದು ಬೆಂಕಿ ಅವಘಡದಿಂದ ತಪ್ಪಿಸಿ ಹೊರಬಂದ ಕಾರ್ಮಿಕರೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News