ಮದ್ಯ ಖರೀದಿಸಲು ಮಗುವನ್ನೇ ಮಾರಾಟ ಮಾಡಿದ ದಂಪತಿ!
ಕೋಲ್ಕತಾ: ಮದ್ಯದ ಚಟವು ಮನುಷ್ಯನನ್ನು ಹೆತ್ತ ಕಂದನನ್ನು ಕೂಡಾ ಮಾರುವಂತಹ ಹೇಯಕೃತ್ಯಕ್ಕೆ ಪ್ರೇರೇಪಿಸುತ್ತದೆ ಎಂಬುದಕ್ಕೆ ಪಶ್ಚಿಮಬಂಗಾಳ ದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಉತ್ತರ 24 ಪರಗಣ ಜಿಲ್ಲೆಯ ಪಾನಿಹಟಿಯಲ್ಲಿ ಮದ್ಯದ ಖರೀದಿಗೆ ಬೇಕಾದ ಹಣಕ್ಕಾಗಿ ತಮ್ಮ ಆರು ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿಯನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಈ ಕೃತ್ಯದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಮಗುವಿನ ತಾತನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣದಲ್ಲಿ ಮಕ್ಕಳ ಮಾರಾಟ ಜಾಲವು ಶಾಮೀಲಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರಾಟ ಮಾಡಿರುವ ಮಗು ಇನ್ನೂ ಕೂಡಾ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ವ್ಯಕ್ತಿಗಳನ್ನು ಜೈದೇವ್ ಚೌಧುರಿ (ಮಗುವಿನ ತಂದೆ), ಸತಿ ಚೌಧುರಿ (ಮಗುವಿನ ತಾಯಿ) ಹಾಗೂ ಕನಾಯಿ ಚೌಧುರಿ (ತಾತ) ಎಂದು ಗುರುತಿಸಲಾಗಿದೆ. ಮಗುವನ್ನು ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ದಂಪತಿಯ ಮಗುವು ನಾಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಮಗುವಿನ ಬಗ್ಗೆ ಸ್ಥಳೀಯರು ವಿಚಾರಿಸಿದಾಗಲೆಲ್ಲಾ ಅದನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿರುವುದಾಗಿ ದಂಪತಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಸಂಶಯಗೊಂಡ ನೆರೆಹೊರೆಯವರು ಸ್ಥಳೀಯ ನಗರಸಭಾ ಸದಸ್ಯನಿಗೆ ಈವಿಷಯ ತಿಳಿಸಿದ್ದು, ಆತ ಅದನ್ನು ಪೊಲೀಸರ ಗಮನಕ್ಕೆ ತಂದಿದ್ದರು.
ಬಂಧಿತರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ಕಸ್ಟಡಿಗೆ ಕಸ್ಟಡಿಗಾಗಿ ಮನವಿಸಲ್ಲಿಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ದಂಪತಿ ದಿನವಿಡೀ ಮದ್ಯದ ನಶೆಯಲ್ಲಿರುತ್ತಿದ್ದರು. ಆಗಾಗ್ಗೆ ಕುಟುಂಬಿಕರು ಹಾಗೂ ನೆರೆಹೊರೆಯವರೊಂದಿಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.