ಮಲಯಾಳಂ ಚಿತ್ರ ನಿರ್ಮಾಪಕ ಮೇಜರ್ ರವಿ ವಿರುದ್ಧ ವಂಚನೆ ಪ್ರಕರಣ ದಾಖಲು

Update: 2024-08-17 11:42 GMT

ಮೇಜರ್ ರವಿ | PC : indiatoday.in

ತ್ರಿಶೂರ್: ಭದ್ರತಾ ಸೇವೆಗಳನ್ನು ಒದಗಿಸುವುದಾಗಿ ಹಣಕಾಸು ಸಂಸ್ಥೆಯೊಂದಕ್ಕೆ ಭರವಸೆ ನೀಡಿ, ರೂ. 12 ಲಕ್ಷ ವಂಚಿಸಿರುವ ಆರೋಪದಲ್ಲಿ ಮಲಯಾಳಂ ಚಿತ್ರ ನಿರ್ಮಾಪಕ ಮೇಜರ್ ರವಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ತ್ರಿಶೂರ್ ಜುಡಿಷಿಯಲ್ ನ್ಯಾಯಾಲಯದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅವರ ಸೂಚನೆಯ ಮೇರೆಗೆ ‘ಕೀರ್ತಿಚಕ್ರ’ ಚಲನಚಿತ್ರವನ್ನು ನಿರ್ಮಿಸಿರುವ ಮೇಜರ್ ರವಿ ವಿರುದ್ಧ ಇರಿಂಜಲಕುಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಹಣಕಾಸು ಸಂಸ್ಥೆಯು ನ್ಯಾಯಾಲಯದ ಮೊರೆ ಹೋಗಿತ್ತು. ಇದರನ್ವಯ, ಈ ಆರೋಪಗಳ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚನೆ ನೀಡಿತ್ತು.

ಪೊಲೀಸರ ಪ್ರಕಾರ, ನಾವು ‘ಥಂಡರ್ ಫೋರ್ಸ್ ಲಿಮಿಟೆಡ್’ ಎಂಬ ಖಾಸಗಿ ಭದ್ರತಾ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರು ಎಂದು ಹೇಳಿಕೊಂಡು ಹಣಕಾಸು ಸಂಸ್ಥೆಯೊಂದನ್ನು ಸಂಪರ್ಕಿಸಿರುವ ರವಿ ಹಾಗೂ ಸಹ ಆರೋಪಿಯೊಬ್ಬರು, ನಾವು ನಿಮ್ಮ ಸಂಸ್ಥೆಗೆ ಭದ್ರತೆ ಒದಗಿಸುತ್ತೇವೆ ಹಾಗೂ ಸಾಲದ ಕಂತನ್ನು ಮರುಪಾವತಿ ಮಾಡಲು ವಿಫಲಗೊಂಡಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿವರಗಳನ್ನು ಕಲೆ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ.

ಈ ಪ್ರಸ್ತಾವಿತ ಸೇವೆಗಾಗಿ ಅವರು ಸದರಿ ಹಣಕಾಸು ಸಂಸ್ಥೆಯಿಂದ ರೂ. 12,48,000 ಮೊತ್ತವನ್ನು ಸ್ವೀಕರಿಸಿದ್ದರು ಎನ್ನಲಾಗಿದೆ.

ಆದರೆ, ಅವರಿಬ್ಬರೂ ಸದರಿ ಹಣಕಾಸು ಸಂಸ್ಥೆಗೆ ಭದ್ರತಾ ಸೇವೆಯನ್ನೂ ಒದಗಿಸಿಲ್ಲ ಅಥವಾ ಹಣವನ್ನೂ ಮರುಪಾವತಿ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಪ್ರಕರಣದ ವಿವಿಧ ಸೆಕ್ಷನ್ ಗಳಡಿ ಮೇಜರ್ ರವಿ ಹಾಗೂ ಸಹ ಆರೋಪಿಯ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಭಾರತೀಯ ಸೇನೆಯಿಂದ ನಿವೃತ್ತಗೊಂಡ ನಂತರ, ಮೋಹನ್ ಲಾಲ್ ಮತ್ತು ಮುಮ್ಮೂಟಿಯಂತಹ ತಾರಾನಟರ ಹಲವಾರು ಚಿತ್ರಗಳನ್ನು ನಿರ್ಮಿಸಿ, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುವ ಮೇಜರ್ ರವಿ ಈ ಕುರಿತು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News