ಮುಂಬೈ ವಿಮಾನ ನಿಲ್ದಾಣದ 20 ಬೀದಿನಾಯಿಗಳಿಗೆ ಆಧಾರ್!
ಮುಂಬೈ: ನಗರದ ವಿಮಾನ ನಿಲ್ದಾಣದ ಹೊರಗಿರುವ 20 ಬೀದಿ ನಾಯಿಗಳಿಗೆ ಶನಿವಾರ ಬೆಳಿಗ್ಗೆ ಗುರುತಿನ ಪತ್ರ ಸಿಕ್ಕಿದೆ. ಈ ನಾಯಿಗಳ ಕುತ್ತಿಗೆಗೆ ಆಧಾರ್‌ಕಾರ್ಡ್‌ಗಳನ್ನು ಸುತ್ತಲಾಗಿದೆ. ಇದಕ್ಕೆ ಕ್ಯೂಆರ್ ಕೋಡ್ ಕೂಡಾ ಇದ್ದು, ಒಂದು ವೇಳೆ ನಾಯಿ ಕಳೆದು ಹೋದಲ್ಲಿ, ಇದನ್ನು ಸ್ಕ್ಯಾನ್ ಮಾಡಿದರೆ, ಈ ನಾಯಿಗಳ ಸಮಗ್ರ ವಿವರ ಲಭ್ಯವಾಗುತ್ತದೆ. ನಾಯಿಯ ಹೆಸರು, ಅವುಗಳಿಗೆ ಉಣಿಸುವವರ ವಿವರ, ಲಸಿಕೆಯ ಮಾಹಿತಿ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ವಿವರಗಳು ಹಾಗೂ ವೈದ್ಯಕೀಯ ಸಲಹೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ನಾಯಿಗಳ ಕೊರಳಿಗೆ ಈ ಐಡಿ ಕಾರ್ಡ್ ಗಳನ್ನು ತೂಗುಹಾಕುವ ಕಾರ್ಯವನ್ನು ತಂಡ ಅತ್ಯುತ್ಸಾಹದಿಂದ ನಡೆಸಿತು. ನಾಯಿಗಳಿಗೆ ಪ್ರತಿದಿನ ಉಣಬಡಿಸುವವರು ಅವುಗಳನ್ನು ಓಲೈಸಿದರೂ, ಇತರ ಮಂದಿ ತಮ್ಮತ್ತ ಆಗಮಿಸುತ್ತಿರುವುದು ಕಂಡು ಶ್ವಾನಗಳು ಆತಂಕಗೊಂಡವು. ಕೆಲ ಗಂಟೆಗಳ ಕಾಲ ಹರಸಾಹಸ ನಡೆಸಿ 20 ನಾಯಿಗಳಿಗೆ ಟ್ಯಾಗ್ ಮಾಡಲಾಯಿತು. ಇದೇ ಸಂದರ್ಭವನ್ನು ಬಳಸಿಕೊಂಡು ಬಿಎಂಸಿ ಅಧಿಕಾರಿಗಳು ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಹೊರಗೆ ಶ್ವಾನಗಳಿಗೆ ಲಸಿಕೆ ಹಾಕಿದರು.
"ಮುಂಜಾನೆ 8.30ರಿಂದ ಈ ಕಾರ್ಯ ಆರಂಭಿಸಿದ್ದೆವು. ಕ್ಯೂಆರ್ ಕೋಡ್ ಟ್ಯಾಗ್ ಗಳನ್ನು ಅಳವಡಿಸಲು ಹಾಗೂ ಲಸಿಕೆ ನೀಡಲು ಅವುಗಳನ್ನು ಅಟ್ಟಿಸಿಕೊಂಡು ಓಡಬೇಕಾಯಿತು" ಎಂದು ಇದಕ್ಕೆ ಮುತುವರ್ಜಿ ವಹಿಸಿದ ಸಿಯಾನ್ ನ ಎಂಜಿನಿಯರ್ ಅಕ್ಷಯ್ ರಿದ್ಲನ್ ವಿವರಿಸಿದರು. ಈ ನಾಯಿಗಳು ಕಳೆದುಹೋದರೆ ಅಥವಾ ಸ್ಥಳಾಂತರಗೊಂಡರೆ ಕ್ಯೂ ಆರ್ ಕೋಡ್ ಅವುಗಳನ್ನು ಒಡೆಯನ ಕುಟುಂಬದ ಜತೆ ಮರು ಜೋಡಿಸಲು ನೆರವಾಗುತ್ತದೆ. ಇದು ನಗರದಲ್ಲಿ ಬೀದಿನಾಯಿಗಳ ಕೇಂದ್ರೀಕೃತ ಮಾಹಿತಿ ನಿರ್ವಹಿಸಲು ಕೂಡಾ ಬಿಎಂಸಿ ಅಧಿಕಾರಿಗಳಿಗೆ ನೆರವಾಗುತ್ತದೆ ಎಂದು ಹೇಳಿದರು.