ದಿಲ್ಲಿಯಲ್ಲಿ ಕಾಂಗ್ರೆಸ್ ಗೆ 1 ಲೋಕಸಭಾ ಸ್ಥಾನ ನೀಡಲು ಮುಂದೆ ಬಂದ ಆಪ್
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಮಿತ್ರ ಪಕ್ಷ ಕಾಂಗ್ರೆಸ್ ಗೆ ಒಂದು ಸ್ಥಾನ ನೀಡಲು ಆಮ್ ಆದ್ಮಿ ಪಕ್ಷವು ನಿರ್ಧರಿಸಿದೆ.
ದಿಲ್ಲಿಯಲ್ಲಿ ಏಳು ಲೋಕಸಭಾ ಸ್ಥಾನಗಳಿವೆ. 2019ರ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ 7 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. 22 ಶೇಕಡ ಮತಗಳೊಂದಿಗೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿತ್ತು. ಮತ ಗಳಿಕೆಯಲ್ಲಿ ಆಮ್ ಆದ್ಮಿ ಪಕ್ಷವು ಮೂರನೇ ಸ್ಥಾನದಲ್ಲಿತ್ತು.
ಪಂಜಾಬ್ ನ ಎಲ್ಲಾ 13 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ, ದಿಲ್ಲಿಯಲ್ಲಿ ಒಂದು ಸ್ಥಾನವನ್ನು ‘ಇಂಡಿಯಾ’ ಮೈತ್ರಿಕೂಟದ ಭಾಗೀದಾರ ಪಕ್ಷ ಕಾಂಗ್ರೆಸ್ ಗೆ ನೀಡಲು ಆಮ್ ಆದ್ಮಿ ಪಕ್ಷವು ಮುಂದಾಗಿದೆ.
ಆದರೆ, ಸಾಮರ್ಥ್ಯದ ಆಧಾರದಲ್ಲಿ ಹೇಳುವುದಾದರೆ, ದಿಲ್ಲಿಯಲ್ಲಿ ಒಂದೇ ಒಂದು ಸ್ಥಾನಕ್ಕೂ ಕಾಂಗ್ರೆಸ್ ಅರ್ಹತೆ ಹೊಂದಿಲ್ಲ ಎಂದು ಆಪ್ ಹೇಳಿದೆ.
ದಿಲ್ಲಿಯ ಒಂದು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕೆಂದು ಆಪ್ ಬಯಸುತ್ತದೆ. ಉಳಿದ ಆರು ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸುತ್ತದೆ ಎಂದು ಆಪ್ ಸಂಸದ ಸಂದೀಪ್ ಪಾಠಕ್ ಹೇಳಿದರು.
‘‘ಸಾಮರ್ಥ್ಯದ ಆಧಾರದಲ್ಲಿ, ದಿಲ್ಲಿಯಲ್ಲಿ ಒಂದು ಸ್ಥಾನಕ್ಕೂ ಕಾಂಗ್ರೆಸ್ ಅರ್ಹತೆ ಹೊಂದಿಲ್ಲ. ಆದರೆ, ಮೈತ್ರಿ ಧರ್ಮವನ್ನು ಗಮನದಲ್ಲಿಟ್ಟುಕೊಂಡು ನಾವು ದಿಲ್ಲಿಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಗೆ ನೀಡುತ್ತಿದ್ದೇವೆ. ದಿಲ್ಲಿಯಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮತ್ತು ಆಪ್ 6 ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ’’ ಎಂದು ಅವರು ನುಡಿದರು.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ‘ಇಂಡಿಯಾ’ ಮೈತ್ರಿಕೂಟದ ಘಟಕ ಪಕ್ಷಗಳಾಗಿವೆ. ಪಂಜಾಬ್ ಮತ್ತು ದಿಲ್ಲಿಗಳಲ್ಲಿ ಸ್ಥಾನ ಹಂಚಿಕೆ ಬಗ್ಗೆ ಅವುಗಳು ಚರ್ಚೆಗಳಲ್ಲಿ ತೊಡಗಿವೆ. ಆದರೆ ಈ ಪಕ್ಷಗಳ ರಾಜ್ಯ ಘಟಕಗಳು ಮೈತ್ರಿಗೆ ನಿರಾಸಕ್ತಿ ತೋರಿಸಿವೆ.