2001ರ ಪ್ರತಿಭಟನೆ ಪ್ರಕರಣ | ಎಎಪಿ ನಾಯಕ ಸಂಜಯ್ ಸಿಂಗ್ ನ್ಯಾಯಾಲಯಕ್ಕೆ ಶರಣು, ಜಾಮೀನು ಮಂಜೂರು
ಸುಲ್ತಾನ್‌ಪುರ : 2001ರ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬುಧವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಶರಣಾಗಿದ್ದು, ಜಾಮೀನು ಪಡೆದಿದ್ದಾರೆ.
"ಸಂಜಯ್ ಸಿಂಗ್ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ನ್ಯಾಯಾಲಯವು 50,000 ರೂ.ಗಳ ಶ್ಯೂರಿಟಿ ಬಾಂಡ್‌ನಲ್ಲಿ ಅವರಿಗೆ ಜಾಮೀನು ನೀಡಿದೆ" ಎಂದು ಅವರ ವಕೀಲ ಮದನ್ ಸಿಂಗ್ ಹೇಳಿದರು.
ಅಲಹಾಬಾದ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಶ್ಯೂರಿಟಿಯನ್ನು ಠೇವಣಿ ಮಾಡಲಾಗಿದ್ದು, ಆಗಸ್ಟ್ 22 ರಂದು ಸುಲ್ತಾನ್‌ಪುರ ನ್ಯಾಯಾಲಯವು ನೀಡಿದ್ದ ಶಿಕ್ಷೆಗೆ ತಡೆ ನೀಡಿತ್ತು.
ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಎಎಪಿ ನಾಯಕ ಸಂಜಯ್ ಸಿಂಗ್ ಗೆ ವಿಶೇಷ ನ್ಯಾಯಾಲಯವು ಕಳೆದ ವರ್ಷ ಜನವರಿ 11 ರಂದು ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿತ್ತು.