ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡಗಳಲ್ಲಿ ಎಲ್ಲ ಸ್ಥಾನಗಳನ್ನು ಕಳೆದುಕೊಂಡ ಆಪ್; ನೋಟಾಕ್ಕಿಂತಲೂ ಕಡಿಮೆ ಮತಗಳಿಕೆ
ಹೊಸದಿಲ್ಲಿ: ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಸೋಲಿಗೆ ರವಿವಾರ ಪ್ರತಿಕ್ರಿಯಿಸಿದ ಆಪ್ ನಾಯಕ ಜಾಸ್ಮಿನ್ ಶಾ ಅವರು, ಆಪ್ ಉತ್ತರ ಭಾರತದಲ್ಲಿ ಅತ್ಯಂತ ದೊಡ್ಡ ಪ್ರತಿಪಕ್ಷವಾಗಿದೆ ಎಂದು ಹೇಳಿಕೊಂಡಿದ್ದಾರೆ.
‘ಪಂಜಾಬ್ ಮತ್ತು ದಿಲ್ಲಿಗಳಲ್ಲಿ ಸರಕಾರಗಳನ್ನು ಹೊಂದಿರುವ ಆಪ್ ಉತ್ತರ ಭಾರತದಲ್ಲಿ ಅತಿ ದೊಡ್ಡ ಪ್ರತಿಪಕ್ಷವಾಗಿ ಹೊರಹೊಮ್ಮಿದೆ’ ಎಂದು ಚುನಾವಣಾ ಫಲಿತಾಂಶಗಳ ನಂತರ ಶಾ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆದಾಗ್ಯೂ ಈ ವಿಧಾನಸಭಾ ಚುನಾವಣೆಗಳಲ್ಲಿ ಆಪ್‌ನ ಸ್ವಂತ ಸಾಧನೆ ಇನ್ನಷ್ಟು ನಿರಾಶಾದಾಯವಾಗಿದೆ ಎನ್ನುವುದನ್ನು ಶಾ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ. ಈ ಮೂರು ರಾಜ್ಯಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲಗೊಂಡಿರುವ ಆಪ್ ನೋಟಾಕ್ಕಿಂತಲೂ ಕಡಿಮೆ ಮತಗಳನ್ನು ಗಳಿಸಿದೆ.
‘ಮೂರು ರಾಜ್ಯಗಳಲ್ಲಿ ಗೆಲುವಿಗಾಗಿ ನಾವು ಬಿಜೆಪಿಯನ್ನು ಅಭಿನಂದಿಸುತ್ತೇವೆ. ಅದು ತನ್ನ ಭರವಸೆಗಳನ್ನು ಈಡೇರಿಸುತ್ತದೆ ಮತ್ತು ‘ಮುಖ್ಯಮಂತ್ರಿ ಲಾಡ್ಲಿ ಬೆಹನಾ ಆವಾಸ್ ಯೋಜನೆ ’ಯಡಿ ಮನೆಗಳನ್ನು ಒದಗಿಸುತ್ತದೆ ಎಂದು ನಾವು ಪ್ರಾಮಾಣಿಕವಾಗಿ ಆಶಿಸಿದ್ದೇವೆ. ಭರವಸೆ ನೀಡಿರುವಂತೆ ಬಿಜೆಪಿಯು 450 ರೂ.ಗಳಿಗೆ ಎಲ್‌ಪಿಜಿ ಸಿಲಿಂಡರ್ ಒದಗಿಸುತ್ತದೆ ಎಂದೂ ನಾವು ಆಶಿಸಿದ್ದೇವೆ. ಅಗ್ಗದ ಎಲ್‌ಪಿಜಿಯನ್ನು ಇಡೀ ರಾಷ್ಟ್ರಕ್ಕೆ ಒದಗಿಸಬೇಕು,ಅದು ಈ ಮೂರು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರಬಾರದು ’ ಎಂದು ಶಾ ಫಲಿತಾಂಶಗಳ ಬಳಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಡಿಯಾ ಮೈತ್ರಿಕೂಟವು ಬದುಕುಳಿದರೆ ಮತ್ತು ಮುಂದುವರಿದರೆ 2024ರಲ್ಲಿ ತಾನು ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯೊಂದಿಗೆ ಕಾಂಗ್ರೆಸ್ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಮೂರು ರಾಜ್ಯಗಳಲ್ಲಿ ತನ್ನ ಪಕ್ಷದ ಕಡಿಮೆ ಮತಗಳಿಕೆಯನ್ನು ಉಲ್ಲೇಖಿಸದೆ ಶಾ,ಆಪ್ ಇನ್ನೂ ಬೆಳವಣಿಗೆಯ ಹಂತದಲ್ಲಿದೆ ಮತ್ತು ತನ್ನ ಸಂದೇಶವು ಪ್ರತಿಯೊಬ್ಬರಿಗೂ ತಲುಪುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿತ್ತು ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ 31 ಸ್ಥಾನಗಳಲ್ಲಿ ಠೇವಣಿಗಳನ್ನು ಕಳೆದುಕೊಂಡಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಆಂಧ್ರಪ್ರದೇಶದಲ್ಲಿ ಪ್ರಚಾರವನ್ನು ನಡೆಸಿದ್ದರು,ಆದರೆ ಅಲ್ಲಿ ಬಿಜೆಪಿ ಎಲ್ಲ 173 ಸ್ಥಾನಗಳಲ್ಲಿ ಸೋಲನ್ನಪ್ಪಿತ್ತು ಮತ್ತು ನೋಟಾಕ್ಕಿಂತಲೂ ಕಡಿಮೆ ಮತಗಳನ್ನು ಗಳಿಸಿತ್ತು. ಇದು ಗುಜರಾತಿನಲ್ಲಿ ಬಿಜೆಪಿಯ ಮತಗಳಿಕೆಯ ಮೇಲೆ ಪರಿಣಾಮವನ್ನು ಬೀರಿತ್ತೇ ಎಂದು ಶಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.