ಅಡ್ವಾಣಿಗೆ ಭಾರತ ರತ್ನ ಘೋಷಣೆ ಕುರಿತಂತೆ “ನಿಂದನಾತ್ಮಕ” ಟ್ವೀಟ್‌: ಹಿರಿಯ ಪತ್ರಕರ್ತ ನಿಖಿಲ್‌ ವಾಗ್ಲೆ ವಿರುದ್ಧ ಎಫ್‌ಐಆರ್‌ ದಾಖಲು

Update: 2024-02-09 11:14 GMT

ನಿಖಿಲ್‌ ವಾಗ್ಲೆ | Photo: Facebook/Nikhil Wagle  

ಪುಣೆ: ಹಿರಿಯ ಬಿಜೆಪಿ ನಾಯಕ ಎಲ್‌ ಕೆ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಘೋಷಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಡ್ವಾಣಿ ಕುರಿತಂತೆ ಹಿರಿಯ ಪತ್ರಕರ್ತ ನಿಖಿಲ್‌ ವಾಗ್ಲೆ ಮಾಡಿದ್ದಾರೆನ್ನಲಾದ ನಿಂದನಾತ್ಮಕ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕ ಸುನೀಲ್‌ ದಿಯೋಧರ್‌ ಅವರು ದಾಖಲಿಸಿರುವ ದೂರಿನ ಆಧಾರದ ಮೇಲೆ ಇಂದು ವಿಶ್ರಾಂಬಾಗ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಗ್ಲೆ ಅವರ ವಿರುದ್ಧ ಐಪಿಸಿ ಸೆಕ್ಷನ್‌ 153ಎ, 500 ಮತ್ತು 505 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಫೆಬ್ರವರಿ 4ರಂದು ಎಕ್ಸ್‌ನಲ್ಲಿ ಟ್ವೀಟ್‌ ಮೂಲಕ ವಾಗ್ಲೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ತಮ್ಮ ಹೇಳಿಕೆ ಮೂಲಕ ವಾಗ್ಲೆ ಅವರು ಸಮಾಜದ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ ಮತ್ತು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಮ್ಮನ್ನು ಜೈಲಿನಲ್ಲಿರಿಸಿದರೂ ತಾವು ತಮ್ಮ ಟ್ವೀಟ್‌ನಲ್ಲಿ ನೀಡಿದ ಹೇಳಿಕೆಗೆ ಬದ್ಧವಾಗಿರುವುದಾಗಿ ನಿಖಿಲ್‌ ವಾಗ್ಲೆ ಹೇಳಿದ್ದು “ಇದು ಅಘೋಷಿತ ತುರ್ತುಪರಿಸ್ಥಿತಿ” ಎಂದು ಬಣ್ಣಿಸಿದ್ದಾರೆ.

ಶುಕ್ರವಾರ ಸಂಜೆ ನಿಖಿಲ್‌ ವಾಗ್ಲೆ ಅವರು ಮುಖ್ಯ ಭಾಷಣಕಾರರಾಗಿರುವ ನಿರ್ಭಯ್‌ ಬನೋ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಬೇಕೆಂದು ಕೋರಿ ಪುಣೆ ಬಿಜೆಪಿ ಘಟಕ ಪೊಲೀಸ್‌ ಇಲಾಖೆಯನ್ನು ಕೋರಿದೆ. ಈ ಕಾರ್ಯಕ್ರಮ ನಡೆದಲ್ಲಿ ಅದನ್ನು ಅಡ್ಡಿಪಡಿಸುವುದಾಗಿ ಬಿಜೆಪಿ ಹೇಳಿದೆ.

ಮುಂಬೈ ನಿವಾಸಿಯಾಗಿರುವ ವಾಗ್ಲೆ ತಾವು ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಣೆಗೆ ಬರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News