ಆರೋಪಿ ಬಾಂಬ್ ತಯಾರಿಸುವುದನ್ನು ಆನ್‌ಲೈನ್ ಮೂಲಕ ಕಲಿತಿದ್ದ: ತನಿಖಾ ಸಂಸ್ಥೆ

Update: 2023-10-30 16:50 GMT

ಫೇಸ್‌ಬುಕ್‌ ಲೈವ್‌ನಲ್ಲಿ ಕಲಮಶೇರಿ ಸ್ಫೋಟದ ಹೊಣೆ ಹೊತ್ತ ಡೊಮಿನಿಕ್ ಮಾರ್ಟಿನ್‌ (Photo: facebook//Bro Subash)

ಎರ್ನಾಕುಳಂ: ಮೂವರು ಸಾವನ್ನಪ್ಪಲು ಕಾರಣವಾದ ಕೇರಳದ ಎರ್ನಾಕುಳಂ ಜಿಲ್ಲೆಯ ಕಲಮಶ್ಶೇರಿ ಪ್ರದೇಶದಲ್ಲಿ ‘ಯೆಹೋವನ ಸಾಕ್ಷಿಗಳ’ ಸಭೆಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಹಲವು ಸ್ಫೋಟಗಳಿಗೆ ನಾಲ್ಕು ಐಇಡಿಗಳನ್ನು ಬಳಸಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ದೃಢಪಡಿಸಿವೆ.

ಪ್ರಾಥಮಿಕ ವಿಧಿ ವಿಜ್ಞಾನ ವಿಶ್ಲೇಷಣೆಯ ಪ್ರಕಾರ ಈ ಐಇಡಿಗಳನ್ನು ತಯಾರಿಸಲು ಕಡಿಮೆ ದರ್ಜೆಯ ಸ್ಫೋಟಕಗಳು ಹಾಗೂ ಪೆಟ್ರೋಲ್ ಅನ್ನು ಬಳಸಲಾಗಿದೆ. ಮೇಲ್ನೋಟಕ್ಕೆ ಇದು ಪಟಾಕಿಗಳಲ್ಲಿ ಬಳಸಿದ ಸ್ಫೋಟಕದಂತೆ ಕಾಣುತ್ತದೆ. ಆದರೆ, ಮುಂದಿನ ಪರೀಕ್ಷೆಯಿಂದ ಖಚಿತ ಸ್ವರೂಪ ದೃಢಪಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ತಂಡ ಘಟನಾ ಸ್ಥಳದಿಂದ ಬ್ಯಾಟರಿ, ವಯರ್, ಸರ್ಕ್ಯೂಟ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ಬಾಂಬ್ ಅನ್ನು ಜೋಡಿಸಲಾಗಿದ್ದ ಕಂಟೈನರ್ ಅನ್ನು ಇನ್ನಷ್ಟೇ ಪತ್ತೆ ಮಾಡಬೇಕಾಗಿದೆ. ಐಇಡಿಗಳನ್ನು ಜೋಡಿಸಲು ಟಿಫಿನ್ ಬಾಕ್ಸ್ ಅನ್ನು ಬಳಸಲಾಗಿದೆ ಎಂದು ಪೊಲೀಸರು ರವಿವಾರ ಶಂಕೆ ವ್ಯಕ್ತಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಸಭಾ ಭವನದಲ್ಲಿ ಸ್ಫೋಟ ಸಂಭವಿಸಿದ ಸ್ಥಳದ ಪರಿಶೀಲನೆ ಸೋಮವಾರ ಅಂತ್ಯಗೊಂಡಿದ್ದು, ಪ್ರತಿ ಬಾಂಬ್‌ಗೆ ಕನಿಷ್ಠ 5 ಲೀಟರ್ ಪೆಟ್ರೋಲ್ ಅನ್ನು ಪ್ಲಾಸ್ಟಿಕ್ ಪೌಚ್‌ನಲ್ಲಿ ಬಳಲಾಗಿದೆ. ಐಇಡಿಗಳನ್ನು ಪ್ಯಾಕ್ ಮಾಡಲು ಗೋಣಿ ಚೀಲಗಳನ್ನು ಹಾಗೂ ಸ್ಫೋಟಕ್ಕೆ ನೆರವಾಗಲು ರೇಡಿಯೊ ಫ್ರೀಕ್ವೆನ್ಸಿ ಸಾಧನಗಳನ್ನು ಬಳಸಲಾಗಿದೆ. ಇಲೆಕ್ಟ್ರಿಕ್ ಚಾರ್ಚ್ ಪೂರೈಸಲು, ಸರ್ಕ್ಯೂಟ್ ಅನ್ನು ಪೂರ್ಣಗೊಳಿಸಲು ಹಾಗೂ ಐಇಡಿಯನ್ನು ಸ್ಫೋಟಗೊಳಿಸಲು ಮೊಬೈಲ್ ಕರೆಯನ್ನು ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಾಂಬ್ ಸ್ಫೋಟದ ಹೊಣೆ ಹೊತ್ತಿರುವ ಪ್ರಕರಣದ ಪ್ರಮುಖ ಶಂಕಿತ ಡೊಮಿನಿಕ್ ಮಾರ್ಟಿನ್, ಬಾಂಬ್ ತಯಾರಿಸುವುದನ್ನು ಕಲಿಯಲು ಇಂಟರ್‌ನೆಟ್ ಅನ್ನು ಬಳಸಿದ್ದ ಹಾಗೂ ತನ್ನ ಮನೆಯಲ್ಲೇ ಐಇಡಿಯನ್ನು ಜೋಡಿಸಿದ್ದ ಎಂದು ಪೊಲೀಸರ ತನಿಖೆ ಬಹಿರಂಗಗೊಳಿಸಿದೆ.

‘‘ಆತ ಗಲ್ಫ್‌ನಲ್ಲಿ ಫೋರ್‌ಮ್ಯಾನ್ ಆಗಿದ್ದ. ಆದುದರಿಂದ ಮೆಷಿನ್‌ಗಳ ಬಗ್ಗೆ ಆತನಿಗೆ ಪ್ರಾಥಮಿಕ ಜ್ಞಾನ ಇತ್ತು. ಉಳಿದ ವಿಷಯಗಳನ್ನು ಆತ ಇಂಟರ್‌ನೆಟ್ ಮೂಲಕ ಕಲಿತಿದ್ದ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News