ಉತ್ತರ ಪ್ರದೇಶ| ನಟಿ ಸಪ್ನಾ ಸಿಂಗ್ ಪುತ್ರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಇಬ್ಬರು ಸ್ನೇಹಿತರ ಬಂಧನ
ಬರೇಲಿ: ತಮ್ಮ 14 ವರ್ಷದ ಪುತ್ರ ಸಂಶಯಾಸ್ಪದವಾಗಿ ಮೃತಪಟ್ಟಿರುವುದನ್ನು ವಿರೋಧಿಸಿ ನಟಿ ಸಪ್ನಾ ಸಿಂಗ್ ಪ್ರತಿಭಟನೆ ನಡೆಸಿದ್ದು, ಈ ಪ್ರಕರಣದ ಸಂಬಂಧ ಮೃತ ಬಾಲಕನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬುಧವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದ ನಂತರ, ಸುಮಾರು 90 ನಿಮಿಷಗಳ ಕಾಲದ ತಮ್ಮ ಪ್ರತಿಭಟನೆಯನ್ನು ಮಂಗಳವಾರ ಸಪ್ನಾ ಸಿಂಗ್ ಅಂತ್ಯಗೊಳಿಸಿದ್ದರು.
ಘಟನೆಯ ಸಂಬಂಧ ಸಪ್ನಾ ಸಿಂಗ್ ಅವರ ಪುತ್ರ ಸಾಗರ್ ಗಂಗ್ವಾರ್ ನ ಇಬ್ಬರು ಸ್ನೇಹಿತರಾದ ಅನುಜ್ ಮತ್ತು ಸನ್ನಿಯನ್ನು ಬಂಧಿಸಿರುವ ಬಂಧಿಸಿರುವ ಪೊಲೀಸರು, ಹತ್ಯೆ ಪ್ರಕರಣದ ಆರೋಪದಲ್ಲಿ ಅವರಿಬ್ಬರನ್ನೂ ಜೈಲಿಗೆ ಕಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿನ ನಿಖರ ಕಾರಣ ದೃಢಪಡದಿದ್ದರೂ, ವಿಷಪ್ರಾಶನ ಅಥವಾ ಹೆಚ್ಚುವರಿ ಪ್ರಮಾಣದ ಮಾದಕ ದ್ರವ್ಯ ಸೇವಿಸಿರುವ ಲಕ್ಷಣಗಳು ಕಂಡು ಬಂದಿವೆ. ಎಂಜಲಿನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಸಂಗ್ರಹಿಸಿಡಲಾಗಿದೆ” ಎಂದು ಫತೇಪುರ್ ವೃತ್ತಾಧಿಕಾರಿ ಅಶುತೋಷ್ ಶಿವಂ ಹೇಳಿದ್ದಾರೆ.
“ನಾವು ಸಾಗರ್ ನೊಂದಿಗೆ ಮಾದಕ ದ್ರವ್ಯ ಹಾಗೂ ಮದ್ಯವನ್ನು ಸೇವಿಸಿದ್ದೆವು ಎಂದು ವಿಚಾರಣೆಯ ಸಂದರ್ಭದಲ್ಲಿ ಅನುಜ್ ಮತ್ತು ಸನ್ನಿ ತಪ್ಪೊಪ್ಪಿಕೊಂಡಿದ್ದಾರೆ. ಮಿತಿ ಮೀರಿದ ಪ್ರಮಾಣದ ಸೇವನೆಯಿಂದ ಸಾಗರ್ ಕುಸಿದು ಬಿದ್ದಿದ್ದಾನೆ. ಇದರಿಂದ ಗಾಬರಿಗೊಳಗಾಗಿರುವ ಅವರಿಬ್ಬರೂ, ಆತನ ದೇಹವನ್ನು ಹೊಲವೊಂದಕ್ಕೆ ಎಳೆದುಕೊಂಡು ಹೋಗಿ ಬಿಸಾಡಿ ಪರಾರಿಯಾಗಿದ್ದಾರೆ” ಎಂದು ಭುತ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಕೂಡಾ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, 8ನೇ ತರಗತಿ ವಿದ್ಯಾರ್ಥಿಯಾದ ಸಾಗರ್, ಬರೇಲಿಯಲ್ಲಿರುವ ಆನಂದ್ ವಿಹಾರ್ ಕಾಲನಿಯಲ್ಲಿ ತನ್ನ ತಾಯಿಯ ಚಿಕ್ಕಪ್ಪನಾದ ಓಂ ಪ್ರಕಾಶ್ ರೊಂದಿಗೆ ವಾಸಿಸುತ್ತಿದ್ದ ಎಂದು ಹೇಳಲಾಗಿದೆ.
ಆತನ ಮೃತದೇಹವು ಇಝ್ಝತ್ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಅದಾಲಖಿಯ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿತ್ತು.