ಲೆಕ್ಕಪರಿಶೋಧಕ ಹುದ್ದೆಗೆ ಡೆಲಾಯ್ಟ್ ರಾಜೀನಾಮೆ ನೀಡಿದ ಬೆನ್ನಿಗೇ ಅದಾನಿ ಸಮೂಹದ ಶೇರು ಮೌಲ್ಯ ಕುಸಿತ

Update: 2023-08-14 15:25 GMT

Photo: PTI 

ಹೊಸದಿಲ್ಲಿ: ಅದಾನಿ ಸಮೂಹದ ಬಂದರು ಕಂಪನಿಯ ಲೆಕ್ಕ ಪರಿಶೋಧಕ ಹುದ್ದೆಗೆ ಡೆಲಾಯ್ಟ್ ಸಂಸ್ಥೆಯು ರಾಜಿನಾಮೆ ಸಲ್ಲಿಸಿದ ಬೆನ್ನಿಗೇ ಸೋಮವಾರ ಅದಾನಿ ಸಮೂಹದ ಶೇರು ಮೌಲ್ಯವು ಕುಸಿತ ಕಂಡಿದೆ ಎಂದು business-standard.com ವರದಿ ಮಾಡಿದೆ.

ಇದಕ್ಕೂ ಮುನ್ನ, ಹಿಂಡೆನ್ ಬರ್ಗ್ ರಿಸರ್ಚ್ ವರದಿಯ ಬಳಿಕ ಬಿಲಿಯಾಧಿಪತಿ ಗೌತಮ್ ಅದಾನಿ ಮಾಲಕತ್ವದ ಅದಾನಿ ಸಮೂಹದ ಇನ್ನಿತರ ಸಂಸ್ಥೆಗಳ ಕುರಿತು ವ್ಯಾಪಕ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದು ಸೂಚಿಸುವ ಮೂಲಕ ಡೆಲಾಯ್ಟ್ ಸಂಸ್ಥೆಯು ಅದಾನಿ ಸಮೂಹದ ಬಂದರು ಕಂಪನಿಯ ಲೆಕ್ಕಪರಿಶೋಧಕ ಹುದ್ದೆಗೆ ರಾಜಿನಾಮೆ ಸಲ್ಲಿಸಿತ್ತು.

ಬಿಎಸ್‍ಇ ಶೇರು ವಹಿವಾಟಿನಲ್ಲಿ ಅದಾನಿ ಎಂಟರ್ ಪ್ರೈಸಸ್ ಶೇರು ಮೌಲ್ಯ ಶೇ. 5.41ರಷ್ಟು ಕುಸಿದ ದಾಖಲಿಸಿದರೆ, ಅದಾನಿ ಟ್ರಾನ್ಸ್ ಮಿಶನ್ ಶೇರು ಮೌಲ್ಯ ಶೇ. 4.77, ಅದಾನಿ ಪವರ್ ಶೇರು ಮೌಲ್ಯ ಶೇ. 4.23, ಅಂಬುಜಾ ಸಿಮೆಂಟ್ಸ್ ಶೇರು ಮೌಲ್ಯ ಶೇ. 4 ಹಾಗೂ ಅದಾನಿ ಪೋರ್ಟ್ಸ್ ಶೇರು ಮೌಲ್ಯ ಶೇ. 3.7ರಷ್ಟು ಕುಸಿತ ದಾಖಲಿಸಿತು.

ಇದರೊಂದಿಗೆ ಅದಾನಿ ಗ್ರೀನ್ ಎನರ್ಜಿ ಶೇರು ಮೌಲ್ಯ ಶೇ. 3.22, ಅದಾನಿ ವಿಲ್ಮರ್ ಶೇರು ಮೌಲ್ಯ ಶೇ. 3.14, ಅದಾನಿ ಟೋಟಲ್ ಗ್ಯಾಸ್ ಶೇರು ಮೌಲ್ಯ ಶೇ. 3, ಎನ್‍ಡಿಟಿವಿ ಶೇರು ಮೌಲ್ಯ ಶೇ. 3 ಹಾಗೂ ಎಸಿಸಿ ಶೇರು ಮೌಲ್ಯ ಶೇ. 2.23ರಷ್ಟು ಕುಸಿತ ಕಂಡಿತು.

ಈಕ್ವಿಟಿ ಮಾರುಕಟ್ಟೆಯಲ್ಲಿ 30 ಶೇರುಗಳನ್ನು ಹೊಂದಿರುವ ಬಿಎಸ್‍ಇ ಸೂಚ್ಯಂಕವು 335.61 ಅಂಕ ಕುಸಿದು, 64,987.04ಗೆ ತಲುಪಿತು.

ನಿರ್ದಿಷ್ಟ ವಹಿವಾಟುಗಳ ಕುರಿತು ಹಿಂಡನ್ ಬರ್ಗ್ ರಿಸರ್ಚ್ ವರದಿಯು ಎಚ್ಚರಿಸಿದ್ದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಡೆಲಾಯ್ಟ್ ಸಂಸ್ಥೆಯು, ಕೆಲವೇ ವಾರಗಳ ಅಂತರದಲ್ಲಿ ಲೆಕ್ಕಪರಿಶೋಧಕ ಹುದ್ದೆಗೆ ರಾಜಿನಾಮೆ ಸಲ್ಲಿಸಿತ್ತು.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ (APSEZ) ಸಂಸ್ಥೆಯು, ಡೆಲಾಯ್ಟ್ ಸಂಸ್ಥೆಯ ರಾಜಿನಾಮೆಯನ್ನು ದೃಢಪಡಿಸಿದ್ದು, ಎಂಎಸ್‍ಕೆಎ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯನ್ನು ನೂತನ ಲೆಕ್ಕಪರಿಶೋಧಕರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

2017ರಿಂದ ಡೆಲಾಯ್ಟ್ ಎಪಿಎಸ್‍ಇಝೆಡ್ ಸಂಸ್ಥೆಯ ಲೆಕ್ಕಪರಿಶೋಧಕ ಸಂಸ್ಥೆಯಾಗಿತ್ತು. ನಂತರ ಅದಕ್ಕೆ ಮತ್ತೆ ಐದು ವರ್ಷಗಳ ಅವಧಿಯನ್ನು ವಿಸ್ತರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News