‘ಛಾವಾ’ ಸಿನಿಮಾ ನೋಡಿ ಅಸೀರ್ ಗಢ ಕೋಟೆಯ ಬಳಿ ಮುಘಲರ ಕಾಲದ ಚಿನ್ನಕ್ಕಾಗಿ ನೆಲ ಅಗೆದ ಗ್ರಾಮಸ್ಥರು!

Update: 2025-03-08 14:51 IST
‘ಛಾವಾ’ ಸಿನಿಮಾ ನೋಡಿ ಅಸೀರ್ ಗಢ ಕೋಟೆಯ ಬಳಿ ಮುಘಲರ ಕಾಲದ ಚಿನ್ನಕ್ಕಾಗಿ ನೆಲ ಅಗೆದ ಗ್ರಾಮಸ್ಥರು!

screengrab:X/@KashifKakvi

  • whatsapp icon

ಭೋಪಾಲ್: ಬಾಲಿವುಡ್ ಚಿತ್ರ ‘ಛಾವಾ’ ಚಿತ್ರ ವೀಕ್ಷಿಸಿ, ಮುಘಲರ ಕಾಲದ ಚಿನ್ನವನ್ನು ಅಸೀರ್ ಗಢ ಕೋಟೆಯ ಬಳಿ ಹುದುಗಿಸಿರುವುದು ಸತ್ಯ ಎಂದೇ ನಂಬಿದ ಗ್ರಾಮಸ್ಥರು, ಅಲ್ಲಿ ನೆಲ ಅಗೆಯಲು ಭಾರಿ ಪ್ರಮಾಣದಲ್ಲಿ ನೆರೆದಿರುವ ಘಟನೆ ಬರ್ಹಂಪುರ್ ನಲ್ಲಿ ನಡೆದಿದೆ. 

ಚಿತ್ರದ ಕತೆ ಹಾಗೂ ಪಾತ್ರಗಳಿಂದ ಪ್ರೇರಿತಗೊಂಡಿರುವ ಗ್ರಾಮಸ್ಥರು, ಹೊಲಗಳಿಂದ ಚಿನ್ನವನ್ನು ಹೊರ ತೆಗೆಯಲು ರಾತ್ರೋರಾತ್ರಿ ಅಸೀರ್ ಗಢ ಕೋಟೆಯ ಬಳಿ ಜಮಾಯಿಸಿದ್ದಾರೆ. ಕೆಲವರು ಚಿನ್ನ ಪತ್ತೆಯಾಗುವ ನಿರೀಕ್ಷೆಯಲ್ಲಿ ಲೋಹಶೋಧಕಗಳನ್ನೂ ಅಲ್ಲಿಗೆ ತಂದಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಈ ಶೋಧ ಕಾರ್ಯಾಚರಣೆಗೆ ಅಂತ್ಯ ಹಾಡಿದರು. ರಾತ್ರಿ 7 ಗಂಟೆಯಿಂದ ಮುಂಜಾನೆ 3 ಗಂಟೆವರೆಗೆ ಈ ನಿಧಿ ಶೋಧ ಕಾರ್ಯಾಚರಣೆ ನಡೆದಿತ್ತು. 

ಜನರು ಫ್ಲ್ಯಾಶ್ ಲೈಟ್ ಗಳನ್ನು ಹಾಕಿಕೊಂಡು ನೆಲ ಅಗೆಯುತ್ತಿರುವ ಈ ಘಟನೆಯ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪತ್ರಕರ್ತ ಕೌಶಿಫ್ ಕಕ್ವಿ, “ಬರ್ಹಾಂಪುರದಲ್ಲಿನ ಅಸೀರ್ ಗಢ ಕೋಟೆಯ ಬಳಿ ಇರುವ ಗ್ರಾಮಸ್ಥರು ‘ಛಾವಾ’ ಚಿತ್ರವನ್ನು ವೀಕ್ಷಿಸಿದ ಬಳಿಕ, ಮುಂಜಾನೆ ಚಿನ್ನದ ಶೋಧಕ್ಕೆ ಮುಂದಾಗಿದ್ದರು. ಮುಘಲ್ ಕಾಲದ ನಿಧಿಯಿದೆ ಎಂಬ ವದಂತಿಗಳಿಗೆ ಬಲಿಯಾಗಿರುವ ಅವರು, ಫ್ಲ್ಯಾಶ್ ಲೈಟ್ ಗಳು ಹಾಗೂ ಲೋಹ ಶೋಧಕಗಳನ್ನಿಡಿದುಕೊಂಡು ಹೊಲಗಳನ್ನು ಅಗೆಯುತ್ತಿದ್ದರು! ಪೊಲೀಸರು ಧಾವಿಸುತ್ತಿದ್ದಂತೆಯೆ ಅವರೆಲ್ಲ ಸ್ಥಳದಿಂದ ಪರಾರಿಯಾದರು” ಎಂದು ಬರೆದುಕೊಂಡಿದ್ದಾರೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು “ಜನರು ಉತ್ಖನಕಾರರಾಗಿ ಬದಲಾದರು” ಎಂದು ಹಾಸ್ಯ ಮಾಡಿದ್ದಾರೆ. ಧಮಾಲ್ ಚಿತ್ರವನ್ನು ಉಲ್ಲೇಖಿಸಿರುವ ಮತ್ತೊಬ್ಬ ಬಳಕೆದಾರರು, “ನನ್ನ ಇತಿಹಾಸದ ತಿಳಿವಳಿಕೆಯ ಪ್ರಕಾರ, ಔರಂಗಜೇಬ್ ಸೇಂಟ್ ಸೆಬಾಸ್ಟಿಯನ್ ಹೂದೋಟದಡಿ ಬೃಹತ್ ಪ್ರಮಾಣದ ಚಿನ್ನವನ್ನು ಹೂತಿಟ್ಟಿದ್ದಾನೆ” ಎಂದು ತಮಾಷೆ ಮಾಡಿದ್ದಾರೆ. “ಮುಂದಿನ ಬಾರಿ ಯಾವುದಾದರೂ ಏಲಿಯನ್ ಚಿತ್ರ ನೋಡಿ, ಹಾರುವ ತಟ್ಟೆಗಳನ್ನು ಹುಡುಕಲು ಹೊರಟುಬಿಡಬೇಡಿ” ಎಂದು ಮತ್ತೋರ್ವ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News