ಸಾಮೂಹಿಕ ರಜೆ: 30 ಉದ್ಯೋಗಿಗಳನ್ನು ವಜಾಗೊಳಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌

Update: 2024-05-09 06:45 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸುಮಾರು 300 ಉದ್ಯೋಗಿಗಳು ಸಾಮೂಹಿಕ ಅನಾರೋಗ್ಯ ರಜೆ ಹಾಕಿ ತಮ್ಮ ಫೋನ್‌ಗಳನ್ನು ಸ್ವಿಚ್ಡ್ ಆಫ್ ಮಾಡಿದ್ದರಿಂದಾಗಿ ಉಂಟಾದ ವಿಮಾನ ಸೇವೆಯಲ್ಲಿನ ಭಾರಿ ವ್ಯತ್ಯಯದ ಮಾರನೆಯ ದಿನ 30 ಮಂದಿ ಕ್ಯಾಬಿನ್ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್‌, ಇನ್ನಿತರರಿಗೆ ಗಡುವು ನೀಡಿದೆ. ವಜಾಗೊಳ್ಳಲಿರುವ ಸಿಬ್ಬಂದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನಿತರ ಉದ್ಯೋಗಿಗಳಿಗೆ ಇಂದು ಸಂಜೆ ನಾಲ್ಕು ಗಂಟೆಯೊಳಗಾಗಿ ಕರ್ತವ್ಯಕ್ಕೆ ಹಾಜರಾಗಿ ಇಲ್ಲವೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಗಡುವು ನೀಡಲಾಗಿದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಸಣ್ಣ ಸ್ವರೂಪದಲ್ಲಿ ಕಾಣಿಸಿಕೊಂಡ ಈ ಬಿಕ್ಕಟ್ಟು, ಈಗ ಪೂರ್ಣ ಪ್ರಮಾಣದ ಬಿಕ್ಕಟ್ಟಿಗೆ ತಿರುಗಿರುವುದರಿಂದ ಇಂದು ಈ ವೈಮಾನಿಕ ಸೇವಾ ಸಂಸ್ಥೆಯ ಒಟ್ಟು 76 ವಿಮಾನ ಯಾನಗಳು ರದ್ದುಗೊಂಡಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಅಂಗ ಸಂಸ್ಥೆಯಾಗಿದ್ದು, ಸದ್ಯ ಇಂದು ಟಾಟಾ ಸಮೂಹದ ಒಡೆತನದಲ್ಲಿದೆ.

ಉದ್ಯೋಗಿಗಳು ನೂತನ ಉದ್ಯೋಗ ನೇಮಕಾತಿ ಷರತ್ತುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಬ್ಬಂದಿಗಳ ಉಪಚಾರದಲ್ಲಿ ಸಮಾನತೆಯ ಕೊರತೆ ಇದೆ ಎಂದು ವಿಮಾನ ಸಿಬ್ಬಂದಿಗಳು ಆರೋಪಿಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಕೆಲವು ಸಿಬ್ಬಂದಿಗಳು ಹಿರಿಯ ಹುದ್ದೆಗಳ ಸಂದರ್ಶನಗಳಲ್ಲಿ ತೇರ್ಗಡೆಯಾಗಿದ್ದರೂ, ಅವರಿಗೆ ಕೆಳ ಹಂತದ ಉದ್ಯೋಗ ಪಾತ್ರಗಳಿಗೆ ಆಮಂತ್ರಣ ನೀಡಲಾಗುತ್ತಿದೆ ಎಂದು ಅವು ಹೇಳಿವೆ. ತಮ್ಮ ಪರಿಹಾರ ಮೊತ್ತದಲ್ಲಿ ಆಗಿರುವ ಬದಲಾವಣೆಯ ಕುರಿತೂ ಸಿಬ್ಬಂದಿಗಳು ತಮ್ಮ ಆಕ್ಷೇಪವೆತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಹಾಗೂ ಎಐಎಕ್ಸ್ (ಈ ಹಿಂದಿನ ಏರ್ ಏಶಿಯಾ ಇಂಡಿಯಾ) ವಿಮಾನ ಯಾನ ಸಂಸ್ಥೆಗಳ ವಿಲೀನ ಪ್ರಕ್ರಿಯೆಯ ನಡುವೆಯೇ ನಡೆಯುತ್ತಿವೆ.



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News