ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ
ಕೊಚ್ಚಿ: ಆಗಸ್ಟ್ 2ರಂದು ಕೊಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿನ ಪ್ರಯಾಣಿಕರೊಬ್ಬರು ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸುಟ್ಟ ವಾಸನೆ ಬರುತ್ತಿರುವುದರ ಕುರಿತು ದೂರಿದ್ದರಿಂದ, ಮುನ್ನೆಚ್ಚರಿಕೆಯ ಕ್ರಮವಾಗಿ ಆ ವಿಮಾನವು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ತುರ್ತು ಭೂಸ್ಪರ್ಶ ಮಾಡಿದೆ ಎಂದು ಗುರುವಾರ ವಿಮಾನ ಸಂಸ್ಥೆಯ ಮೂಲಗಳು ತಿಳಿಸಿವೆ ಎಂದು business-standard.com ವರದಿ ಮಾಡಿದೆ.
ಮೂಲಗಳ ಪ್ರಕಾರ, ವಿಮಾನವು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರೊಬ್ಬರು ಒಂದು ಬಗೆಯ ಸುಟ್ಟ ವಾಸನೆ ಬರುತ್ತಿರುವ ಬಗ್ಗೆ ದೂರಿದ್ದಾರೆ ಎಂದು ಹೇಳಲಾಗಿದೆ.
ಪ್ರಯಾಣಿಕರೊಬ್ಬರು ವಿಮಾನದೊಳಗೆ ಸುಟ್ಟ ವಾಸನೆ ಬರುತ್ತಿದೆ ಎಂದು ದೂರಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನವು ಮತ್ತೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಮರಳಲು ನಿರ್ಧರಿಸಿತು ಎನ್ನಲಾಗಿದೆ.
ಬುಧವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ವಿಮಾನವನ್ನು ಪರೀಕ್ಷೆಗೊಳಪಡಿಸಿದಾಗ ಯಾವುದೇ ಸಮಸ್ಯೆ ಕಂಡು ಬರಲಿಲ್ಲವೆಂದು ವಿಮಾನ ಸಂಸ್ಥೆ ತಿಳಿಸಿದೆ.
ವಿಳಂಬ ಆಧಾರಿತ ಸೇವೆಯನ್ವಯ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಶಾರ್ಜಾಗೆ ತೆರಳಲು 175 ಪ್ರಯಾಣಿಕರಿಗೆ ಬದಲಿ ವಿಮಾನ ವ್ಯವಸ್ಥೆ ಮಾಡಿಕೊಟ್ಟಿತು.