ಆಲಿಗಢ | ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ
ಹೊಸದಿಲ್ಲಿ: ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಹಿಗ್ಗಾಮಗ್ಗಾ ಥಳಿಸಿ ಹತ್ಯೆಗೈದ ಆರು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ಆಲಿಗಢದಲ್ಲಿ ಬಂಧಿಸಿದ್ದಾರೆ. ಕೊಲೆಯ ಸುದ್ದಿ ಹರಡುತ್ತಿದ್ದಂತೆಯೇ ನಗರದಲ್ಲಿ ಉದ್ವಿಗ್ನ ವಾತಾವರಣವುಂಟಾಗಿದ್ದು, ಮಾಮು ಭಾಂಜಾ ಪ್ರದೇಶದಲ್ಲಿ ಅಂಗಡಿ ಮುಂಗಟ್ಟೆಗಳನ್ನು ಮುಚ್ಚಲಾಗಿತ್ತು.
ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನಿಷ್ಠ ಆರು ಮಂದಿಯ ಗುಂಪೊಂದು ಫರೀದ್ ಯಾನೆ ಔರಂಗಜೇಬ್ ಎಂಬಾತನನ್ನು ಮನಬಂದಂತೆ ಥಳಿಸುತ್ತಿರುವುದು ವೀಡಿಯೊದಲ್ಲಿ ಕಾಣಿಸಿದೆ.
ಆರೋಪಿಗಳು ಕೊಲೆಯಾದ ವ್ಯಕ್ತಿಯ ನೆರೆಹೊರೆಯವರಾಗಿದ್ದು, ಅವರನ್ನು ರಾಹುಲ್, ಮೋಹಿತ್, ಚಿರಾಗ್ ವಾರ್ಷ್ನೆಯಿ,ಅಂಕಿತ್ ವಾರ್ಷ್ನೆಯಿ, ಕಮಲ್ ಚೌಧುರಿ ಹಾಗೂ ಜೈಗೋಪಾಲ್ ಶರ್ಮಾ ಎಂಬುದಾಗಿ ಗುರುತಿಸಲಾಗಿದೆಯೆಂದು ಅಲಿಗಢ ಪೊಲೀಸ್ ಅಧೀಕ್ಷಕ ಮೃಗಾಂಕ್ ಶೇಖರ್ ಪಾಠಕ್ ತಿಳಿಸಿದ್ದಾರೆ.
ಸ್ಥಳೀಯ ವ್ಯಾಪಾರಿ ಮುಖೇಶ್ ಚಂದ್ ಮಿತ್ತಲ್ ಎಂಬವರ ಮನೆಗೆ ಔರಂಗಜೇಬ್ ನುಗ್ಗಿದ್ದಾನೆಂದು ಆರೋಪಿಸಿ ಆತನನ್ನು ಆ ಮನೆಯವರು ಹಾಗೂ ನೆರೆಹೊರೆಯವರು ಬರ್ಬರವಾಗಿ ಥಳಿಸಿ ಹತ್ಯೆಗೈದಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ.
ಮೃತನ ಸೋದರ ಮೊಹಮ್ಮದ್ ಜಾಖಿ ನೀಡಿದ ದೂರಿನ ಮೇಲೆ ಪೊಲೀಸರು ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 302 (ಕೊಲೆ), 341 (ತಪ್ಪಾಗಿ ವಶದಲ್ಲಿರಿಸಿಕೊಳ್ಳುವುದು), 147 (ಗಲಭೆ), 148 (ದೊಂಬಿಯಲ್ಲಿ ತೊಡಗುವುದು,ಮಾರಕಾಯುಧ ಹೊಂದಿರುವುದು), 149 (ಕಾನೂನುಬಾಹಿರವಾಗಿ ಜಮಾವಣೆ) ಹಾಗೂ 34 (ಸಮಾನ ದುರುದ್ದೇಶ) ರ ಅಡಿ ಪ್ರಕರಣ ದಾಖಲಿಸಲಾಗಿದೆ. ತನ್ನ ಸೋದರನು ಮುಸ್ಲಿಮನೆಂದು ತಿಳಿದಾಗ ಆರೋಪಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಜಾಖಿ ಅವರು ದೂರಿನಲ್ಲಿ ಆಪಾದಿಸಿದ್ದಾರೆ.