ಅಮೆಝಾನ್, ಫ್ಲಿಪ್‌ಕಾರ್ಟ್ ಮಾರಾಟಗಾರರ ಮೇಲೆ ಈಡಿ ದಾಳಿ
ಹೊಸದಿಲ್ಲಿ : ಅಮೆಝಾನ್ ಮತ್ತು ಫ್ಲಿಪ್‌ಕಾರ್ಟ್ ಮುಂತಾದ ದೈತ್ಯ ಆನ್‌ಲೈನ್ ಮಾರಾಟ ಕಂಪೆನಿಗಳೊಂದಿಗೆ ವ್ಯವಹಾರ ನಡೆಸುವ ಕೆಲವು ಮಾರಾಟಗಾರರ (ಸೆಲ್ಲರ್) ಕಚೇರಿಗಳಲ್ಲಿ ಅನುಷ್ಠಾನ ನಿರ್ದೇಶನಾಲಯವು ಗುರುವಾರ ಶೋಧ ಕಾರ್ಯಾಚರಣೆ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮ)ಯಡಿ ನಡೆಸಲಾಗುವ ತನಿಖೆಯ ಭಾಗವಾಗಿ ಶೋಧ ನಡೆದಿದೆ.
ಈ ಮಾರಾಟಗಾರರಿಗೆ ಸೇರಿದ ಕನಿಷ್ಠ 15 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ಶೋಧ ನಡೆಸಿದೆ ಎನ್ನಲಾಗಿದೆ.
ಆಯ್ದ ಮಾರಾಟಗಾರರಿಗೆ ಆದ್ಯತೆ ನೀಡುವ ಮೂಲಕ ಮತ್ತು ವಸ್ತುಗಳಿಗೆ ಭಾರೀ ರಿಯಾಯಿತಿ ನೀಡುವ ಮೂಲಕ ಅಮೆಝಾನ್ ಮತ್ತು ಫ್ಲಿಪ್‌ಕಾರ್ಟ್ ಇತರ ಕಂಪೆನಿಗಳಿಗೆ ಹಾನಿ ಮಾಡುತ್ತಿದೆ ಹಾಗೂ ಸ್ಪರ್ಧೆಗೆ ಸಂಬಂಧಿಸಿದ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎನ್ನುವುದನ್ನು ಭಾರತೀಯ ಸ್ಪರ್ಧಾ ಆಯೋಗ ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆಝಾನ್ ಮತ್ತು ಫ್ಲಿಪ್‌ಕಾರ್ಟ್‌ನಂಥ ಆನ್‌ಲೈನ್ ಮಾರಾಟ ಕಂಪೆನಿಗಳ ಮೂಲಕ ವ್ಯಾಪಾರ ಮಾಡುವ ಕೆಲವು ‘‘ಆಯ್ದ’’ ಮಾರಾಟಗಾರರ ಆರ್ಥಿಕ ವ್ಯವಹಾರಗಳನ್ನು ಪರಿಶೀಲಿಸಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ತನಿಖೆಯ ಭಾಗವಾಗಿ ದಿಲ್ಲಿ, ಗುರುಗ್ರಾಮ (ಹರ್ಯಾಣ), ಹೈದರಾಬಾದ್ (ತೆಲಂಗಾಣ) ಮತ್ತು ಬೆಂಗಳೂರಿನ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಯಿತು.
ಕಾನೂನುಬಾಹಿರ ಆರ್ಥಿಕ ಅಭ್ಯಾಸಗಳಲ್ಲಿ ತೊಡಗಿಕೊಂಡಿರಬಹುದಾದ ಮಾರಾಟಗಾರರು ಅಮೆಝಾನ್ ಮತ್ತು ಫ್ಲಿಪ್‌ಕಾರ್ಟ್ ಮುಂತಾದ ಆನ್‌ಲೈನ್ ಮಾರಾಟ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ಪತ್ತೆ ಹಚ್ಚಲು ಅನುಷ್ಠಾನ ನಿರ್ದೇಶನಾಲಯವು ಈ ಶೋಧ ಕಾರ್ಯಕ್ಕೆ ಇಳಿದಿದೆ ಎನ್ನಲಾಗಿದೆ.