“ಸಂದೇಶಖಾಲಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರಕಾರದಿಂದ ಮಹಿಳೆಯರ ಧ್ವನಿ ಹತ್ತಿಕ್ಕಲು ಯತ್ನ”
ಕೋಲ್ಕತಾ : ಆಡಳಿತಾರೂಢ ಟಿಎಂಸಿ ನಾಯಕರ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ ಸಂದೇಶಖಾಲಿಯ ದೊಡ್ಡ ಸಂಖ್ಯೆಯ ಮಹಿಳೆಯರ ಧ್ವನಿಯನ್ನು ಪಶ್ಚಿಮಬಂಗಾಳ ಸರಕಾರ ದಮನಿಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸೋಮವಾರ ಹೇಳಿದ್ದಾರೆ.
‘‘ಮಮತಾ ಬ್ಯಾನರ್ಜಿ ಸರಕಾರ ಮಹಿಳೆಯರ ಧ್ವನಿಯನ್ನು ದಮನಿಸಲು ಪ್ರಯತ್ನಿಸುತ್ತಿದೆ. ಆದರಿಂದ ಸತ್ಯ ಹೊರಗೆ ಬರುತ್ತಿಲ್ಲ. ನಾನು ಮಹಿಳೆಯರ ಸಂಕಷ್ಟವನ್ನು ಆಲಿಸಲು ಸಂದೇಶಾಖಾಲಿಯಲ್ಲಿ ಸಂಪೂರ್ಣ ಒಂದು ದಿನ ಇದ್ದೆ. ಅಪರಾಧಿಯನ್ನು ಬಂಧಿಸಬೇಕು. ಒಮ್ಮೆ (ಶಾಜಹಾನ್) ಶೇಖ್ ನನ್ನು ಬಂಧಿಸಿದರೆ, ಹೆಚ್ಚಿನ ಮಹಿಳೆಯರು ದೂರು ನೀಡಲು ಮುಂದೆ ಬರುತ್ತಾರೆ ಎಂಬುದು ನನ್ನ ನಂಬಿಕೆ. ನಾವು ಅವರಲ್ಲಿ ವಿಶ್ವಾಸ ತುಂಬಬೇಕು’’ ಎಂದು ಸಂದೇಶಖಾಲಿಗೆ ತಲುಪಿದ ಬಳಿಕ ಶರ್ಮಾ ಅವರು ಹೇಳಿದ್ದಾರೆ.
‘‘ನಾನು ಪೊಲೀಸರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಸಂತ್ರಸ್ತರು ನನ್ನೊಂದಿಗೆ ಮಾತನಾಡಬೇಕೆಂದು ಬಯಸುತ್ತೇನೆ. ರಾಷ್ಟ್ರೀಯ ಮಹಿಳಾ ಆಯೋಗ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಸಂತ್ರಸ್ತರಿಂದ ಸ್ವೀಕರಿಸಿದ ಪ್ರತಿ ದೂರಿನ ಕುರಿತಂತೆ ನಾವು ಕ್ರಮ ತೆಗೆದುಕೊಳ್ಳಲಿದ್ದೇವೆ. ಅದು ಹತ್ಯೆಯಾಗಿರಲಿ ಅಥವಾ ಅತ್ಯಾಚಾರವಾಗಿರಲಿ, ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಾರರು. ವಾಸ್ತವವೆಂದರೆ, ಅವರು ಸಂತ್ರಸ್ತರ ಸಂಬಂಧಿಕರನ್ನು ಬಂಧಿಸುತ್ತಾರೆ. ಇದು ಕೇವಲ ಸಂದೇಶಖಾಲಿಯ ಪರಿಸ್ಥಿತಿಯಲ್ಲ. ಸಂಪೂರ್ಣ ರಾಜ್ಯದ ಪರಿಸ್ಥಿತಿ ಎಂದು ಅವರು ಹೇಳಿದ್ದಾರೆ.
ನಾವು ರಾಷ್ಟ್ರಪತಿ ಅವರಿಗೆ ವರದಿ ಸಲ್ಲಿಸಲಿದ್ದೇವೆ. ಅವರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಶೇಕ್ ಶಹಜಹಾನ್ ನ ಬಂಧನವಾಗಿಲ್ಲ. ಆದುದರಿಂದ ಮಹಿಳೆಯರು ಭೀತರಾಗಿದ್ದಾರೆ. ಶೇಖ್ ಶಹಜಹಾನ್ ನನ್ನು ಬಂಧಿಸಲು ನಾವು ಒತ್ತಡ ಹೇರಬೇಕಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅಥವಾ ಪೊಲೀಸ್ ಅಧೀಕ್ಷಕರು ತನ್ನನ್ನು ಭೇಟಿಯಾಗಲು ಅಲ್ಲಿರಲಿಲ್ಲ ಎಂದು ರೇಖಾ ಶರ್ಮಾ ಹೇಳಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಇಬ್ಬರು ಸದಸ್ಯರ ತಂಡ ಕಳೆದ ವಾರ ಸಂದೇಶಖಾಲಿ ಪ್ರದೇಶದಲ್ಲಿ ಪರಿಸ್ಥಿತಿ ಅವಲೋಕಿಸಿದ ಹಾಗೂ ವರದಿ ಸಲ್ಲಿಸಿದ ಬಳಿಕ ಶರ್ಮಾ ಅವರು ಈ ಭೇಟಿ ನೀಡಿದ್ದಾರೆ.