ಅರ್ಜುನ ಪ್ರಶಸ್ತಿ ವಿಜೇತ ಪಂಜಾಬ್ ಡಿಎಸ್‌ಪಿ ಶವವಾಗಿ ಪತ್ತೆ
ಚಂಡೀಗಢ: ಅರ್ಜುನ ಪ್ರಶಸ್ತಿ ವಿಜೇತ, ಪಂಜಾಬ್ ಸಶಸ್ತ್ರ ಪೊಲೀಸ್ (ಪಿಎಪಿ)ನ ಉಪ ಸೂಪರಿಂಟೆಂಡೆಂಟ್ ದಲ್ಬೀರ್ ಸಿಂಗ್ ಸೋಮವಾರ ಜಲಂಧರ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
54 ವರ್ಷದ ದಲ್ಬೀರ್ ಸಂಗ್ರೂರ್ ನಲ್ಲಿ ಕರ್ತವ್ಯದಲ್ಲಿದ್ದರು. ಅವರ ಮೃತದೇಹವು ಜಲಂಧರಿನ ಬಸ್ತಿ ಬಾವ ಖೇಲ್ನಲ್ಲಿರುವ ರಸ್ತೆಯೊಂದರಲ್ಲಿ ಪತ್ತೆಯಾಗಿದೆ. ಅವರ ತಲೆಗೆ ಗಾಯಗಳಾಗಿದ್ದವು.
‘‘ಅವರ ಒಂದು ಕಾಲು ಅಪ್ಪಚ್ಚಿಯಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ವಪನ್ ಶರ್ಮ ಪಿಟಿಐಗೆ ತಿಳಿಸಿದರು.
ಸಂಶಯಾಸ್ಪದ ಸನ್ನಿವೇಶದಲ್ಲಿ ಮೃತದೇಹವೊಂದು ಪತ್ತೆಯಗಿರುವ ಬಗ್ಗೆ ಪೊಲೀಸರು ನಮಗೆ ಮಾಹಿತಿ ನೀಡಿದರು ಎಂದು ದಲ್ಬೀರ್ ಸಿಂಗ್ ಸಹೋದರ ರಂಜಿತ್ ಸಿಂಗ್ ಹೇಳಿದ್ದಾರೆ.ಬಳಿಕ ಸಿಂಗ್ರ ಕುಟುಂಬವು ಪೊಲೀಸರಿಗೆ ದೂರು ನೀಡಿತು.
ಇದೊಂದು ಅಪಘಾತ ಎಂಬುದಾಗಿ ಪೊಲೀಸರು ಆರಂಭದಲ್ಲಿ ಭಾವಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ವೇಳೆ ದಲ್ಬೀರ್ರ ಕುತ್ತಿಗೆಯಲ್ಲಿ ಪಿಸ್ತೂಲ್ ಗುಂಡೊಂದು ಪತ್ತೆಯಾಗಿದೆ. ಅವರ ಸರ್ವಿಸ್ ರಿವಾಲ್ವರ್ ಕೂಡ ನಾಪತ್ತೆಯಾಗಿದೆ.
ಡಿಸೆಂಬರ್ 31ರಂದು ಹೊಸ ವರ್ಷದ ಸಂಭ್ರಮದ ಬಳಿಕ, ಅವರನ್ನು ಬಸ್ ನಿಲ್ದಾಣದ ಸಮೀಪ ತಾವು ಬಿಟ್ಟು ಬಂದಿದ್ದೇವೆ ಎಂದು ಡಿಎಸ್ಪಿಯ ಸ್ನೇಹಿತರು ಹೇಳಿದ್ದಾರೆ.
ದಲ್ಬೀರ್ ಸಿಂಗ್ ಕಳೆದ ತಿಂಗಳು ಜಲಂಧರ್ ನಲ್ಲಿ ಕೆಲವು ಸ್ಥಳೀಯರೊಂದಿಗೆ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇತ್ತಂಡಗಳು ರಾಜಿಯಾದ ಹಿನ್ನೆಲೆಯಲ್ಲಿ ಯಾವುದೇ ಮೊಕದ್ದಮೆ ದಾಖಲಾಗಿರಲಿಲ್ಲ. ಮೊದಲು ವೇಟ್ ಲಿಫ್ಟರ್ ಆಗಿದ್ದ ದಲ್ಬೀರ್ ಸಿಂಗ್ ಅವರಿಗೆ 2000ದಲ್ಲಿ ಅರ್ಜುನ ಪ್ರಶಸ್ತಿ ನೀಡಲಾಗಿತ್ತು.