90ರ ದಶಕದ ಶಸ್ತ್ರಾಸ್ತ್ರ ಪ್ರಕರಣ: ಲಾಲು ಪ್ರಸಾದ್ ಯಾದವ್‌ ವಿರುದ್ಧ ಬಂಧನ ವಾರಂಟ್

Update: 2024-04-06 14:38 GMT

ಲಾಲು ಪ್ರಸಾದ್ ಯಾದವ್‌ | Photo : PTI

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನ ವಿಶೇಷ ನ್ಯಾಯಾಲಯವು 1995-97ರಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಅಕ್ರಮ ಖರೀದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ಕಾಯಂ ಬಂಧನ ವಾರಂಟ್ ಅನ್ನು ಶುಕ್ರವಾರ ಹೊರಡಿಸಿದೆ.

1995-97ರ ಪ್ರಕರಣವು ನಕಲಿ ದಾಖಲೆಗಳನ್ನು ಬಳಸಿ ಅಧಿಕೃತ ಡೀಲರ್ ನಿಂದ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿದೆ. ಇಂದರಗಂಜ್ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ 23 ಆರೋಪಿಗಳಿದ್ದು,ಎಲ್ಲರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಪೈಕಿ ಲಾಲು ಯಾದವರನ್ನು ತಲೆ ಮರೆಸಿಕೊಂಡ ಆರೋಪಿ ಎಂದು ಘೋಷಿಸಲಾಗಿದೆ ಎಂದು ವಿಶೇಷ ಸರಕಾರಿ ವಕೀಲ ಅಭಿಷೇಕ ಮೆಹ್ರೋತ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಾಸಿಕ್ಯೂಷನ್ ಪ್ರಕಾರ ಲಾಲು ಯಾದವ್ ಪರವಾಗಿ ಯಾರೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಕಾಯಂ ಬಂಧನ ವಾರಂಟ್ ಹೊರಡಿಸಲಾಗಿದೆ.

ಜಾಮೀನು ನೀಡಬಹುದಾದ,‌ ಬಂಧನ ಅಥವಾ ಜಾಮೀನುರಹಿತ ವಾರಂಟ್ ಗಳನ್ನು ಹೊರಡಿಸಿದ ಬಳಿಕವೂ ವ್ಯಕ್ತಿಯು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗದಿದ್ದರೆ ಕಾಯಂ ಬಂಧನ ವಾರಂಟ್ ಅನ್ನು ಹೊರಡಿಸಲಾಗುತ್ತದೆ. ಜಾಮೀನು ನೀಡಬಹುದಾದ ಮತ್ತು ಬಂಧನ ವಾರಂಟ್ ಗಳಡಿ ಆದೇಶಗಳ ಜಾರಿಯ ಬಳಿಕ ಆರೋಪಿಯನ್ನು ತನ್ನೆದುರು ಹಾಜರು ಪಡಿಸಲು ನ್ಯಾಯಾಲಯವು ಗಡುವು ವಿಧಿಸುತ್ತದೆ. ಆದರೆ ಕಾಯಂ ಬಂಧನ ವಾರಂಟ್ ನಡಿ ಗಡುವು ವಿಧಿಸಲಾಗುವುದಿಲ್ಲ, ಆರೋಪಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕಾಗುತ್ತದೆ.

ಬಿಹಾರದ ಮೇವು ಹಗರಣ ಪ್ರಕರಣದಲ್ಲಿ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದ ಲಾಲು ಯಾದವ್ 2021,ಎಪ್ರಿಲ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News