ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಲಿರುವ ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ವು ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿರುವುದನ್ನು ಪ್ರಶ್ನಿಸಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ದಿಲ್ಲಿ ಸಚಿವ ಸೌರಭ್ ಭಾರಧ್ವಜ್ ಹೇಳಿದ್ದಾರೆ.
ಕೋರ್ಟ್ ತೀರ್ಪಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಎಎಪಿ ಹಿರಿಯ ನಾಯಕರೂ ಆಗಿರುವ ಸೌರಭ್ ಭಾರಧ್ವಜ್, ‘ನಾವು ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಯೋಚಿಸಿದ್ದೇವೆ. ಅಬಕಾರಿ ನೀತಿ ಹಗರಣವು ದೊಡ್ಡ ರಾಜಕೀಯ ಪಿತೂರಿʼ ಎಂದರು.
ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸೇರಿದಂತೆ ಕೇಂದ್ರ ತನಿಖಾ ತಂಡಗಳು ಒಂದೇ ಒಂದು ರೂಪಾಯಿ ಅಕ್ರಮ ಹಣ ಪತ್ತೆ ಮಾಡಲು ವಿಫಲವಾಗಿದೆ. ಕೇಜ್ರಿವಾಲ್ ಅವರನ್ನು ಮುಗಿಸುವ ಮಾಡಿರುವ ರಾಜಕೀಯ ಪಿತೂರಿ ಇದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರಿಗೆ ಜಾಮೀನು ಸಿಕ್ಕಿದೆ. ಕೇಜ್ರಿವಾಲ್ ಅವರಿಗೂ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಿಗಲಿದೆ ಎಂದು ಸೌರಭ್ ಭಾರಧ್ವಜ್ ಹೇಳಿದ್ದಾರೆ.