ಮತ ಯಂತ್ರ ಧ್ವಂಸಗೊಳಿಸಿದ ಆರೋಪ: ಬಿಜೆಪಿ ಅಭ್ಯರ್ಥಿ ಪೊಲೀಸ್‌ ವಶಕ್ಕೆ

Update: 2024-05-26 06:47 GMT

ಪ್ರಶಾಂತ ಜಗದೇವ್ (Photo credit: odishaassembly.nic.in)

ಭುವನೇಶ್ವರ: ಮತ ಯಂತ್ರವನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಶನಿವಾರ ಒಡಿಶಾದ ಖುರ್ದಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಶಾಂತ ಜಗದೇವ್ ಅವರನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯಿಂದಾಗಿ ವಿಧಾನಸಭಾ ಚುನಾವಣೆಯ ಆರನೆ ಹಂತದ ಮತದಾನಕ್ಕೆ ಅಡಚಣೆಯುಂಟಾಗಿತ್ತು. ಒಡಿಶಾದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳೆರಡೂ ಏಕಕಾಲಕ್ಕೆ ನಡೆಯುತ್ತಿವೆ.

ಶನಿವಾರ ಮಧ್ಯಾಹ್ನ ಬೇಗುನಿಯ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕ್ವಾನ್ರಿಪಾಟ್ನಾಗೆ ತಮ್ಮ ಬೆಂಬಲಿಗರೊಂದಿಗೆ ತೆರಳಿದ್ದ ಜಗದೇವ್, ಅಲ್ಲಿ ಚುನಾವಣಾಧಿಕಾರಿಯೊಬ್ಬರೊಂದಿಗೆ ವಾಗ್ವಾದ ನಡೆಸಿದ್ದರು ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಾಗ್ವಾದದ ಬೆನ್ನಿಗೇ, ಮತಗಟ್ಟೆಯಿಂದ ತೆರಳುವುದಕ್ಕೂ ಮುನ್ನ ಜಗದೇವ್ ವಿದ್ಯುನ್ಮಾನ ಮತ ಯಂತ್ರವನ್ನು ಧ್ವಂಸಗೊಳಿಸಿದ್ದರು ಎಂದು ಆರೋಪಿಸಲಾಗಿದೆ.

ಘಟನೆಯ ನಂತರ, ಪೊಲೀಸರು ಜಗದೇವ್ ರ ವಾಹನವನ್ನು ಮಾರ್ಗಮಧ್ಯದಲ್ಲೇ ತಡೆದಿದ್ದರು.

ಆದರೆ, ವಿದ್ಯುನ್ಮಾನ ಮತ ಯಂತ್ರವು ಆಕಸ್ಮಿಕವಾಗಿ ಜಾರಿ ಬಿದ್ದು ಹಾನಿಗೊಳಗಾಯಿತು ಎಂದು ತಮ್ಮ ಮೇಲಿನ ಆರೋಪಗಳನ್ನು ಜಗದೇವ್ ಅಲ್ಲಗಳೆದಿದ್ದಾರೆ.

ಜಗದೇವ್ ಚಿಲಿಕ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಅವರು 2019ರಲ್ಲಿ ಈ ಕ್ಷೇತ್ರದಿಂದ ಬಿಜೆಡಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2014ರಲ್ಲಿ ಬೇಗುನಿಯ ವಿಧಾನಸಭಾ ಕ್ಷೇತ್ರದಿಂದಲೂ ಬಿಜೆಡಿ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದರು.

2021ರಲ್ಲಿ ಬಿಜೆಪಿ ನಾಯಕನೊಬ್ಬನನ್ನು ಥಳಿಸಿದ ಆರೋಪದ ಮೇಲೆ ಆಡಳಿತಾರೂಢ ಬಿಜೆಡಿ ಪಕ್ಷವು ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಇದಾದ ನಂತರ ಅವರು ಮಾರ್ಚ್ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News