ಪ್ರತಿಪಕ್ಷ ವಿರೋಧಿ ಬಜೆಟ್ ವಿರುದ್ಧ ಪ್ರತಿಭಟಿಸಲು ನೀತಿ ಆಯೋಗದ ಸಭೆಗೆ ಹಾಜರಿ : ಮಮತಾ ಬ್ಯಾನರ್ಜಿ
ಕೋಲ್ಕತಾ : ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ದಿಲ್ಲಿಗೆ ಪ್ರಯಾಣಿಸಿದ್ದಾರೆ. ನೀತಿ ಆಯೋಗದ ಸಭೆಯು ಶನಿವಾರ ದಿಲ್ಲಿಯಲ್ಲಿ ನಡೆಯಲಿದೆ. 2024-25ರ ಕೇಂದ್ರ ಬಜೆಟ್‌ನಲ್ಲಿ ಪ್ರತಿಪಕ್ಷ ಆಡಳಿತದ ರಾಜ್ಯಗಳ ಬಗ್ಗೆ ಕೇಂದ್ರ ತೋರಿಸಿರುವ ‘‘ಮಲತಾಯಿ ಧೋರಣೆ’’ಯ ವಿರುದ್ಧ ಸಭೆಯಲ್ಲಿ ತಾನು ಧ್ವನಿ ಎತ್ತುವುದಾಗಿ ಅವರು ಹೇಳಿದ್ದಾರೆ.
‘‘ನಾನು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಬಜೆಟ್‌ಗೆ ಮುನ್ನೇ ಹೇಳಿದ್ದೆ. ಆಯೋಗ ಸೂಚಿಸಿರುವಂತೆ, ನನ್ನ ಭಾಷಣದ ಲಿಖಿತ ಪ್ರತಿಯೊಂದನ್ನು ಅದಕ್ಕೆ ಈಗಾಗಲೇ ಕಳುಹಿಸಲಾಗಿದೆ. ಬಜೆಟ್ ಮಂಡನೆಯಾದ ಬಳಿಕ, ಪ್ರತಿಪಕ್ಷ ಆಡಳಿತದ ರಾಜ್ಯಗಳನ್ನು ಹೇಗೆ ನಿರ್ಲಕ್ಷಿಸಲಾಗಿದೆ ಎನ್ನುವುದನ್ನು ನಾನು ಕಂಡುಕೊಂಡೆ. ಪ್ರತಿಪಕ್ಷ ಆಡಳಿತದ ರಾಜ್ಯಗಳ ಬಗ್ಗೆ ಬಜೆಟ್‌ನಲ್ಲಿ ಮಲತಾಯಿ ಧೋರಣೆಯನ್ನು ತೋರಿಸಲಾಗಿದೆ. ಈ ವಿಷಯದ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ. ಅವರು ನನಗೆ ಮಾತನಾಡಲು ಬಿಟ್ಟರೆ, ಒಳ್ಳೆಯದು. ಬಿಡದಿದ್ದರೆ, ಪ್ರತಿಭಟಿಸಿ ಅಲ್ಲಿಂದ ಹೊರಡುತ್ತೇನೆ’’ ಎಂದು ದಿಲ್ಲಿಗೆ ಪ್ರಯಾಣಿಸುವ ಮುನ್ನ ಕೋಲ್ಕತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಹೇಳಿದರು.
‘‘ಈ ತಾರತಮ್ಯ ಮತ್ತು ಈ ರಾಜಕೀಯ ಪಕ್ಷಪಾತವವನ್ನು ನಾವು ಸ್ವೀಕರಿಸುವುದಿಲ್ಲ’’ ಎಂದು ಅವರು ಹೇಳಿದರು.
ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ) ಮುಖ್ಯಸ್ಥರೂ ಆಗಿರುವ ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆಯೊಂದರಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ನರೇಂದ್ರ ಮೋದಿ ಸರಕಾರವು 2014ರಲ್ಲಿ ಯೋಜನಾ ಆಯೋಗವನ್ನು ರದ್ದುಪಡಿಸಿರುವುದನ್ನು ಅವರು ಪ್ರತಿಭಟಿಸುತ್ತಾ ಬಂದಿದ್ದಾರೆ. ಇದು ಯೋಜನಾ ಆಯೋಗದ ರೂವಾರಿ ಸುಭಾಶ್ಚಂದ್ರ ಬೋಸ್ ಅವರಿಗೆ ಮಾಡಿದ ಅವಮಾನವಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಡಳಿತವಿರುವ ಮೂರು ರಾಜ್ಯಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿವೆ. ಬಹಿಷ್ಕಾರವು ಇಂಡಿಯಾ ಮೈತ್ರಿಕೂಟದ ತಂತ್ರಗಾರಿಕೆ ಎಂಬುದಾಗಿ ಪರಿಗಣಿಸಲಾಗಿರುವಾಗ, ಸಭೆಗೆ ಹಾಜರಾಗಲು ಮಮತಾ ಬ್ಯಾನರ್ಜಿ ತೆಗೆದುಕೊಂಡಿರುವ ನಿರ್ಧಾರವು ಅಚ್ಚರಿಗೆ ಕಾರಣವಾಗಿತ್ತು. ತೃಣಮೂಲ ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಘಟಕ ಪಕ್ಷವಾಗಿದೆ.