ವಿಮಾನದಲ್ಲಿ ಮಗುವಿಗೆ ಉಸಿರಾಟದ ತೊಂದರೆ: ವಾಯು ಮಾರ್ಗದಲ್ಲೇ ರಕ್ಷಿಸಿದ ಇಬ್ಬರು ವೈದ್ಯರು
ಹೊಸ ದಿಲ್ಲಿ: ರಾಂಚಿಯಿಂದ ದಿಲ್ಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಇಂಡಿಗೋ ಪ್ರಯಾಣಿಸುತ್ತಿದ್ದ ಹುಟ್ಟಿನಿಂದಲೇ ಹೃದಯ ಕಾಯಿಲೆ ಹೊಂದಿದ್ದ ಮಗುವಿನಲ್ಲಿ ಗಂಭೀರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ನೆರವಿಗೆ ಬಂದಿರುವ ಇಬ್ಬರು ವೈದ್ಯರು ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ndtv.com ವರದಿ ಮಾಡಿದೆ.
ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವಿಗೆ ವೈದ್ಯ ತರಬೇತಿ ಪಡೆದಿರುವ ಐಎಎಸ್ ಅಧಿಕಾರಿ ಡಾ. ನಿತಿನ್ ಕುಲಕರ್ಣಿ ಹಾಗೂ ರಾಂಚಿಯ ಸದರ್ ಆಸ್ಪತ್ರೆಯ ವೈದ್ಯರೊಬ್ಬರು ವಯಸ್ಕರಿಗೆ ಮೀಸಲಾದ ಮಾಸ್ಕ್ ಮೂಲಕ ಆಮ್ಲಜನಕ ಪೂರೈಸಿ, ವಿಮಾನದಲ್ಲಿ ಲಭ್ಯವಿದ್ದ ತುರ್ತು ವೈದ್ಯಕೀಯ ನೆರವನ್ನು ಬಳಸಿ ಚಿಕಿತ್ಸೆ ನೀಡಿದ್ದಾರೆ.
ಒಂದು ಗಂಟೆಯ ನಂತರ ವಿಮಾನವು ಭೂಸ್ಪರ್ಶ ಮಾಡಿದ ನಂತರ, ವೈದ್ಯಕೀಯ ತಂಡವೊಂದು ಮಗುವಿಗೆ ಆಮ್ಲಜನಕದ ನೆರವು ನೀಡಿದೆ. ತಮ್ಮ ಮಗುವಿನ ಹೃದಯ ರೋಗದ ಚಿಕಿತ್ಸೆಗಾಗಿ ಪೋಷಕರು ಆ ಮಗುವನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.
ಶನಿವಾರ, ವಿಮಾನ ಟೇಕಾಫ್ ಆದ 20 ನಿಮಿಷಗಳ ನಂತರ, ಮಗುವಿನಲ್ಲಿ ಗಂಭೀರ ಸ್ವರೂಪದ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ವಿಮಾನದ ಸಿಬ್ಬಂದಿಗಳು ಆ ಮಗುವಿಗೆ ಯಾರಾದರೂ ವೈದ್ಯರಿಂದ ತುರ್ತು ನೆರವು ಬೇಕಿದೆ ಎಂದು ಘೋಷಣೆ ಮಾಡಿದ್ದಾರೆ. ಆಗ ಮಗುವಿನ ನೆರವಿಗೆ ಧಾವಿಸಿರುವ ಸದ್ಯ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ಕುಲಕರ್ಣಿ ಹಾಗೂ ರಾಂಚಿಯ ಸದರ್ ಆಸ್ಪತ್ರೆಯ ಡಾ. ಮೊಝಮ್ಮಿಲ್ ಫಿರೋಝ್, ಮಗುವಿಗೆ ತುರ್ತು ಚಿಕಿತ್ಸೆ ಒದಗಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಕುಲಕರ್ಣಿ, “ಮಗುವು ಉಸಿರಾಟದ ತೊಂದರೆ ಅನುಭವಿಸುತ್ತಿದ್ದುದರಿಂದ ಆ ಮಗುವಿನ ತಾಯಿಯು ಅಳುತ್ತಿದ್ದರು. ಅದನ್ನು ಗಮನಿಸಿದ ನಾನು ಹಾಗೂ ಡಾ. ಮೊಝಮ್ಮಿಲ್ ಅವರು ಮಗುವಿನ ಆರೈಕೆಯನ್ನು ಮಾಡಿದೆವು. ವಿಮಾನದಲ್ಲಿ ಮಗುವಿನ ಮಾಸ್ಕ್ ಅಥವಾ ತೂರು ನಳಿಕೆ ಲಭ್ಯವಿಲ್ಲದೆ ಇದ್ದುದರಿಂದ ವಯಸ್ಕರ ಮಾಸ್ಕ್ ಬಳಸಿ ಮಗುವಿಗೆ ಆಮ್ಲಜನಕವನ್ನು ಪೂರೈಸಲಾಯಿತು” ಎಂದು ಹೇಳಿದ್ದಾರೆ.
ಮಗುವನ್ನು ರಕ್ಷಿಸಿದ ಇಬ್ಬರು ವೈದ್ಯರನ್ನು ಸಹ ಪ್ರಯಾಣಿಕರೊಬ್ಬರು ಶ‍್ಲಾಘಿಸಿದ್ದು, “ವೈದ್ಯರು ದೇವರು ಕಳಿಸಿರುವ ದೇವತೆಗಳು. ಇಂದು ನಾನು ಪ್ರಯಾಣ ಬೆಳೆಸುತ್ತಿದ್ದ ವಿಮಾನದಲ್ಲಿ ಆರು ತಿಂಗಳ ಮಗುವನ್ನು ರಕ್ಷಿಸಿದ್ದನ್ನು ಕಂಡೆ. ಜಾರ್ಖಂಡ್ ರಾಜಭವನದ ಐಎಎಸ್ ಅಧಿಕಾರಿಯಾದ ಡಾ. ನಿತಿನ್ ಕುಲಕರ್ಣಿ ಅವರು ತಮ್ಮ ವೈದ್ಯ ಕರ್ತವ್ಯವನ್ನು ನಿರ್ವಹಿಸಿ ಮಗುವನ್ನು ರಕ್ಷಿಸಿದರು. ನಿಮಗೆ ವಂದನೆಗಳು ಸರ್” ಎಂದು x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.