EVM ತಿರುಚಿದ ಆರೋಪದ ಹಿನ್ನೆಲೆ ; ನಾಂದೇಡ್ ನಲ್ಲಿ ಇವಿಎಂ, ವಿವಿಪ್ಯಾಟ್ ಗಳಲ್ಲಿನ ಮತಗಳ ಪರಿಶೀಲನೆ

Update: 2024-12-09 08:11 GMT

ಸಾಂದರ್ಭಿಕ ಚಿತ್ರ | Photo : PTI

ಮುಂಬೈ: ಮಹಾರಾಷ್ಟ್ರದ ನಾಂದೇಡ್ ನಲ್ಲಿ ಜಿಲ್ಲಾಡಳಿತವು ಇವಿಎಂ ಮತ್ತು ವಿವಿಪ್ಯಾಟ್ ಗಳಲ್ಲಿ ದಾಖಲಾದ ಮತಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಅಂಕಿ-ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

75 ಮತಗಟ್ಟೆ ಕೇಂದ್ರಗಳಲ್ಲಿನ ಮತಗಳನ್ನು ಚುನಾವಣೋತ್ತರವಾಗಿ ಪರಿಶೀಲನೆ ನಡೆಸಿದಾಗ ಇವಿಎಂಗಳು ಮತ್ತು ವಿವಿಪ್ಯಾಟ್ ಸ್ಲಿಪ್ಗಳ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರದ ನಾಂದೇಡ್ ಜಿಲ್ಲಾಡಳಿತ ತಿಳಿಸಿದೆ.

ಚುನಾವಣಾ ಆಯೋಗದ ಸೂಚನೆ ಮೇರೆಗೆ ಮತ ಎಣಿಕೆ ಹಾಗೂ ಪರಿಶೀಲನೆ ಕಾರ್ಯ ನಡೆದಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಕೇಂದ್ರಗಳಿಂದ ಇವಿಎಂಗಳಲ್ಲಿ ಪಡೆದ ಅಭ್ಯರ್ಥಿವಾರು ಮತಗಳನ್ನು ವಿವಿಪ್ಯಾಟ್ಗಳೊಂದಿಗೆ ತಾಳೆ ಮಾಡಲಾಗಿದೆ. 75 ಕೇಂದ್ರಗಳಲ್ಲಿ, 30 ಲೋಕಸಭೆ ಉಪಚುನಾವಣೆ ಕೇಂದ್ರಗಳು ಮತ್ತು 45 ವಿಧಾನಸಭೆ ಚುನಾವಣೆ ಕೇಂದ್ರಗಳ ಮತಗಳನ್ನು ಪರಿಶೀಲಿಸಲಾಗಿದೆ ಎಂದು ನಾಂದೇಡ್ ಜಿಲ್ಲಾಧಿಕಾರಿ ಅಭಿಜಿತ್ ರಾವುತ್ ಹೇಳಿದ್ದಾರೆ.

ಅಭ್ಯರ್ಥಿಗಳು, ಪ್ರತಿನಿಧಿಗಳು ಮತ್ತು ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಎಣಿಕೆಯ ಸಮಯದಲ್ಲಿ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿವಿಪ್ಯಾಟ್ಗಳ ಸ್ಲಿಪ್ಗಳನ್ನು ಭೌತಿಕವಾಗಿ ಎಣಿಸಲಾಗಿದೆ ಮತ್ತು ಇವಿಎಂಗಳಲ್ಲಿನ ಮತಗಳೊಂದಿಗೆ ತಾಳೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಅನುಕೂಲವಾಗುವಂತೆ ಇವಿಎಂಗಳನ್ನು ತಿರುಚಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ನಾಂದೇಡ್ನ ಎಲ್ಲಾ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ) ಮತ್ತು ಎನ್ಸಿಪಿ(ಅಜಿತ್ ಪವಾರ್) ಅಂದರೆ ಮಹಾಯುತಿ ಒಕ್ಕೂಟದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News