ಬಾಲ್ಟಿಮೋರ್ ಸೇತುವೆ ಕುಸಿತ: ಢಿಕ್ಕಿ ಹೊಡೆದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬೈಡನ್
ಹೊಸದಿಲ್ಲಿ: ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಬೃಹತ್ ಸರಕು ಹಡಗೊಂದು ಢಿಕ್ಕಿಯಾದ ನಂತರ ಮಂಗಳವಾರ ಸೇತುವೆ ಕುಸಿತ ತಕ್ಷಣ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಯನ್ನು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅದೇ ಸಮಯ ಹೆಚ್ಚಿನ ಸಂಖ್ಯೆಯ ಭಾರತೀಯರಿದ್ದ ಹಡಗಿನ ಸಿಬ್ಬಂದಿಯ ಸಮಯಪ್ರಜ್ಞೆಯನ್ನೂ ಶ್ಲಾಘಿಸಿದ್ದಾರೆ.
“ಹಡಗಿನ ಸಿಬ್ಬಂದಿ ಮೇರಿಲ್ಯಾಂಡ್ ಸಾರಿಗೆ ಇಲಾಖೆಗೆ ತಕ್ಷಣ ಸುದ್ದಿ ಮುಟ್ಟಿಸಿ ಹಡಗಿನ ಮೇಲೆ ತಾವು ನಿಯಂತ್ರಣ ಕಳೆದುಕೊಂಡಿರುವುದಾಗಿ ತಿಳಿಸಿದರು. ಈ ಕಾರಣ ಸ್ಥಳೀಯ ಪ್ರಾಧಿಕಾರಗಳು ತಕ್ಷಣ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಇದು ಹಲವು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ,” ಎಂದು ಬೈಡನ್ ಹೇಳಿದ್ದಾರೆ.
ಮಂಗಳವಾರ ಬಾಲ್ಟಿಮೋರ್‌ನಿಂದ ನಿರ್ಗಮಿಸಿದ್ದ ಸಿಂಗಾಪುರ ಧ್ವಜ ಹೊಂದಿದ್ದ ಕಂಟೇನರ್ ಹಡಗು ಡಾಲಿ, ಶ್ರೀಲಂಕಾದತ್ತ ಸಾಗುತ್ತಿದ್ದ ಸಂದರ್ಭ ಸೇತುವೆಯ ಕಾಂಕ್ರೀಟ್ ಕಂಬಕ್ಕೆ ಢಿಕ್ಕಿ ಹೊಡೆದ ಕೆಲವೇ ಸೆಕೆಂಡ್‌ಗಳಲ್ಲಿ ಇಡೀ ಸೇತುವೆ ಕುಸಿದಿತ್ತು.
ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿ ಸುರಕ್ಷಿತರಾಗಿದ್ದರೂ ಸೇತುವೆಯಲ್ಲಿ ದುರಸ್ತಿ ಕೈಗೊಳ್ಳುತ್ತಿದ್ದ ಆರು ಮಂದಿ ನಾಪತ್ತೆಯಾಗಿದ್ದಾರೆ.
ಈ ಸೇತುವೆಯ ಸಂಪೂರ್ಣ ದುರಸ್ತಿಗೆ ಅಮೆರಿಕಾ ಸರ್ಕಾರ ಅನುದಾನ ನೀಡಲಿದೆ ಎಂದು ಬೈಡನ್ ಹೇಳಿದ್ದಾರೆ.