ನಿಷೇಧಿತ ಸಂಘಟನೆಗಳಿಗಾಗಿ ಹಣ ಬಳಕೆಯಾಗುತ್ತಿಲ್ಲವಾದರೆ ಯುಎಪಿಎ ಅಡಿ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್ ತೀರ್ಪು
ಚೆನ್ನೈ: ಕೇಂದ್ರ ಸರಕಾರವು ತನಿಖೆ ನಡೆಸಿ ಬ್ಯಾಂಕ್ ಖಾತೆಗಳಲ್ಲಿಯ ಹಣವನ್ನು ನಿಷೇಧಿತ ಸಂಘಟನೆಗಾಗಿ ಬಳಸಲಾಗುತ್ತಿದೆ ಅಥವಾ ಅಂತಹ ಉದ್ದೇಶವನ್ನು ಹೊಂದಿದೆ ಎನ್ನುವುದು ಸಾಬೀತಾಗದಿದ್ದರೆ ಅಂತಹ ಖಾತೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ (ಯುಎಪಿಎ) ಯಡಿ ಸ್ತಂಭನಗೊಳಿಸುವಂತಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಎಂ.ಎಸ್.ರಮೇಶ ಮತ್ತು ಸುಂದರ ಮೋಹನ ಅವರ ಪೀಠವು,ಯುಎಪಿಎ ಅಡಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಕ್ಕೆ ಹಣಕಾಸು ನೆರವು ಒದಗಿಸುತ್ತಿದೆ ಎಂಬ ಶಂಕೆಯಲ್ಲಿ ಚೆನ್ನೈ ಮೂಲದ ತಮಿಳುನಾಡು ಡೆವಲಪ್‌ಮೆಂಟ್ ಫೌಂಡೇಷನ್ ಟ್ರಸ್ಟ್‌ನ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಿದ್ದ ಕಾರ್ಯಕಾರಿ ಆದೇಶವನ್ನು ರದ್ದುಗೊಳಿಸಿದೆ.
ಯುಎಪಿಎದ ಕಲಂ 7 ಕಾನೂನುಬಾಹಿರ ಸಂಘಟನೆಯ ಹಣದ ಬಳಕೆಯನ್ನು ನಿಷೇಧಿಸಲು ಕೇಂದ್ರಕ್ಕೆ ಅಧಿಕಾರವನ್ನು ನೀಡುತ್ತದೆ ಮತ್ತು ಕಲಂ 7(1) ಅಂತಹ ನಿಷೇಧ ಆದೇಶಗಳನ್ನು ಹೊರಡಿಸುವ ಮುನ್ನ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಸೂಚಿಸುತ್ತದೆ. ಈ ನಿಬಂಧನೆಗಳು ಪೂರ್ವ ವಿಚಾರಣೆ ಮತ್ತು ವಸ್ತುನಿಷ್ಠ ತೃಪ್ತಿ ಅಥವಾ ಆರೋಪ ಸಾಬೀತಾಗುವುದನ್ನು ಕಡ್ಡಾಯಗೊಳಿಸಿವೆ ಎಂದು ಬೆಟ್ಟು ಮಾಡಿರುವ ಪೀಠವು,ಪ್ರಸ್ತುತ ಪ್ರಕರಣದಲ್ಲಿ ಸಾಬೀತು ಮಾಡಲು ತಾನು ಅನುಸರಿಸಿದ ವಿಧಾನವನ್ನು ಕೇಂದ್ರ ಸರಕಾರವು ತಿಳಿಸಿಲ್ಲ. ಡಿಜಿಟಲ್ ಸಾಧನಗಳಿಂದ ಕೆಲವು ದಾಖಲೆಗಳನ್ನು ಅದು ನೆಚ್ಚಿಕೊಂಡಿದೆ ಮತ್ತು ಈ ದಾಖಲೆಗಳು ಪಿಎಫ್‌ಐ ಹೆಸರನ್ನು ಮಾತ್ರ ತೋರಿಸಿವೆ, ಅರ್ಜಿದಾರ ಟ್ರಸ್ಟ್‌ನ ಹೆಸರನ್ನಲ್ಲ ಎಂದು ಹೇಳಿದೆ.
ಪಿಎಫ್‌ಐ ಜೊತೆ ತಾನು ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ತನ್ನ ಬ್ಯಾಂಕ್ ಖಾತೆಯಲ್ಲಿಯ ಹಣವನ್ನು ಎಂದಿಗೂ ಪಿಎಫ್‌ಐ ಚಟುವಟಿಕೆಗಳಿಗೆ ಬಳಸಲಾಗಿಲ್ಲ ಎಂದು ಅರ್ಜಿದಾರ ಟ್ರಸ್ಟ್ ವಾದಿಸಿದೆ. ಅರ್ಜಿದಾರ ಟ್ರಸ್ಟ್ ಮತ್ತು ಪಿಎಫ್‌ಐ ನಡುವೆ ಸಂಬಂಧವನ್ನು ಸಾಬೀತುಗೊಳಿಸಲು ಪ್ರತಿವಾದಿಗಳು ವಿಫಲಗೊಂಡಿದ್ದಾರೆ ಎಂದು ಉಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.