ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಯಾವುದೇ ಮಾಜಿ ಆಸ್ಟ್ರೇಲಿಯಾ ಆಟಗಾರನನ್ನು ಸಂಪರ್ಕಿಸಿಲ್ಲ: ಜಯ್ ಶಾ‌ ಸ್ಪಷ್ಟನೆ

Update: 2024-05-24 10:12 GMT

 ಜಯ್ ಶಾ‌ | PC : PTI  

ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆಗಾಗಿ ಬಿಸಿಸಿಐ ಯಾವುದೇ ಮಾಜಿ ಆಸ್ಟ್ರೇಲಿಯಾ ಆಟಗಾರನನ್ನು ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯಲಿರುವ 2024ರ ಟಿ-20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅವಧಿಯು ಮುಕ್ತಾಯಗೊಳ್ಳಲಿರುವುದರಿಂದ, ಮುಖ್ಯ ತರಬೇತುದಾರ ಹುದ್ದೆಗೆ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27ರ ಸಂಜೆ ಆರು ಗಂಟೆ ಕೊನೆಯ ದಿನವಾಗಿದೆ.

ಇತ್ತೀಚೆಗೆ, ಎರಡು ಬಾರಿ ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ರಿಕಿ ಪಾಂಟಿಂಗ್ ಅವರನ್ನು ಮುಖ್ಯ ತರಬೇತುದಾರ ಹುದ್ದೆಗೆ ಬಿಸಿಸಿಐ ಸಂಪರ್ಕಿಸಿದೆ ಎಂದು ವರದಿಯಾಗಿತ್ತು. ಆದರೆ, ಈ ಮಾಧ್ಯಮ ವರದಿಗಳನ್ನು ಅಲ್ಲಗಳೆದಿರುವ ಜಯ್ ಶಾ, ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಾಜೂಕು ಪ್ರಕ್ರಿಯೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಯ್ ಶಾ, “ನಾನಾಗಲಿ ಅಥವಾ ಬಿಸಿಸಿಐ ಆಗಲಿ ಯಾವುದೇ ಮಾಜಿ ಆಸ್ಟ್ರೇಲಿಯಾ ಆಟಗಾರನನ್ನು ಮುಖ್ಯ ತರಬೇತುದಾರ ಹುದ್ದೆಗೆ ಸಂಪರ್ಕಿಸಿಲ್ಲ. ಕೆಲವು ವಲಯದ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳು ಸಂಪೂರ್ಣ ತಪ್ಪಾಗಿವೆ. ನಮ್ಮ ರಾಷ್ಟ್ರೀಯ ತಂಡಕ್ಕೆ ಸೂಕ್ತ ತರಬೇತುದಾರರನ್ನು ಆಯ್ಕೆ ಮಾಡುವುದು ಸೂಕ್ಷ್ಮ ಹಾಗೂ ಸಮಗ್ರ ಪ್ರಕ್ರಿಯೆಯಾಗಿದೆ. ಭಾರತೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿರುವ ಹಾಗೂ ಉತ್ತಮ ದರ್ಜೆಯ ವ್ಯಕ್ತಿಗಳನ್ನು ಗುರುತಿಸುವತ್ತ ಗಮನ ಹರಿಸಲಾಗಿದೆ. ಭಾರತೀಯ ತಂಡವನ್ನು ಮುಂದಿನ ಹಂತಕ್ಕೆ ಎತ್ತಲು ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಕುರಿತು ನಮ್ಮ ತರಬೇತುದಾರರು ಆಳವಾದ ಅರಿವು ಹೊಂದಿರುವುದು ಮುಖ್ಯವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News