ಭಾರತದ ‘ಬಲಿಷ್ಠ ಆರ್ಥಿಕ ಬೆಳವಣಿಗೆ ’ ಪ್ರಚಾರವನ್ನು ನಂಬುವುದು ಗಂಭೀರ ಪ್ರಮಾದ: ರಘುರಾಮ್ ರಾಜನ್

Update: 2024-03-27 15:44 GMT

 ರಘುರಾಮ್‌ ರಾಜನ್ | Photo: PTI 

ಹೊಸದಿಲ್ಲಿ : ಭಾರತದ ಬಲಿಷ್ಠ ಆರ್ಥಿಕ ಬೆಳವಣಿಗೆ ಕುರಿತಾಗಿ ನಡೆಯುತ್ತಿರುವ ಪ್ರಚಾರವನ್ನು ನಂಬುವುದು ದೇಶದ ಜನತೆ ಮಾಡುವ ಅತಿ ದೊಡ್ಡ ಪ್ರಮಾದವಾಗಿದೆ ಎಂದು ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ರಘುರಾಮ್‌ ರಾಜನ್ ತಿಳಿಸಿದ್ದಾರೆ.

ಬ್ಲೂಮ್ ಬರ್ಗ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ನಾವು ‘‘ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗಿದ್ದೇವೆ ಎಂಬ ಪ್ರಚಾರವನ್ನು ನೀವು (ಜನರು) ನಂಬಬೇಕೆಂದು ರಾಜಕಾರಣಿಗಳು ಬಯಸುತ್ತಿದ್ದಾರೆ. ಆದರೆ ಈ ಪ್ರಚಾರವು ನಿಜವಾಗಲು ನಾವು ಇನ್ನೂ ಹಲವು ವರ್ಷಗಳ ಕಾಲ ಕಠಿಣ ಶ್ರಮ ಪಡಬೇಕಾಗಿದೆ. ಆದರೆ ಭಾರತವು ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗುವ ಹಂತಕ್ಕೆ ನಾವು ತಲುಪಿದ್ದೇವೆ ಎಂಬುದಾಗಿ ನಾವು ನಂಬಬೇಕೆಂದು ರಾಜಕಾರಣಿಗಳು ಬಯಸುತ್ತಿದ್ದಾರೆ. ಇಂತಹ ನಂಬಿಕೆಗೆ ಬಲಿಬೀಳುವುದು, ಭಾರತವು ಮಾಡುವ ಅತಿ ದೊಡ್ಡ ಪ್ರಮಾದ ಎಂದು ಖ್ಯಾತ ಅರ್ಥಶಾಸ್ತ್ರಜ್ಞರಾದ ರಘುರಾಮ್‌ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಕಾರ್ಮಿಕ ಶಕ್ತಿಯನ್ನು ದೇಶಕ್ಕೆ ಲಾಭದಾಯಕವಾಗಿ ಪರಿವರ್ತಿಸಬೇಕಾದರೆ, ಅವರನ್ನು ಉತ್ತಮ ಉದ್ಯೋಗಗಳಲ್ಲಿ ನಿಯೋಜಿಸಬೇಕು ಎಂದು ರಘುರಾಮ್ ಸಲಹೆ ನೀಡಿದರು.

ಭಾರತವು ಉದ್ಯೋಗಕ್ಕೆ ಅರ್ಹವಾದ ಕಾರ್ಮಿಕ ಶಕ್ತಿಯನ್ನು ಸೃಷ್ಟಿಸಬೇಕು. ಎರಡನೆಯದಾಗಿ ತನ್ನಲ್ಲಿರುವ ಕಾರ್ಮಿಕಪಡೆಗೆ ಅರ್ಹ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ದೇಶ ಅನೇಕ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣವು ದೊರೆಯದೆ ಇದ್ದಲ್ಲಿ, 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯ ದೇಶವಾಗಿಸಬೇಕೆಂಬ ಭಾರತ ಸರಕಾರದ ಮಹತ್ವಾಕಾಂಕ್ಷೆಯು ಅವಿವೇಕದ್ದಾಗಿರುವುದು ಎಂದು ರಾಜನ್ ಹೇಳಿದ್ದಾರೆ.

ಭಾರತವು ಸುಸ್ಥಿರತೆಯ ಆಧಾರದಲ್ಲಿ ಶೇ.8ರಷ್ಟು ಬೆಳವಣಿಗೆಯನ್ನು ಸಾಧಿಸಬೇಕಾದರೆ ಭಾರತವು ಬಹಳಷ್ಟು ಶ್ರಮಿಸಬೇಕಾದ ಅಗತ್ಯವಿದೆ ಎದುಂ ರಾಜನ್ ತಿಳಿಸಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕದ ಬಳಿಕ ಭಾರತದ ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಇಳಿಕೆಯುಂಟಾಗಿರುವುದನ್ನು ಇತ್ತೀಚಿನ ಅಧ್ಯಯನ ವರದಿಗಳು ತಿಳಿಸಿರುವುದನ್ನು ಅವರು ಸಂದರ್ಶನದಲ್ಲಿ ಉಲ್ಲೇಖಿಸಿದರು. ದೇಶದಲ್ಲಿ ಶೇ.20.5ರಷ್ಟು ಮೂರನೆ ತರಗತಿಯ ಮಕ್ಕಳಲ್ಲಿ ಇಬ್ಬರು ಮಾತ್ರವೇ ಪಠ್ಯವನ್ನು ಓದಲು ಶಕ್ತರಾಗಿದ್ದಾರೆ. ಸಾಕ್ಷರತಾ ದರದಲ್ಲಿ ಭಾರತವು, ವಿಯೆಟ್ನಾಂನಂತಹ ರಾಷ್ಟ್ರಗಳಿಗಿಂತ ಹಿಂದೆ ಬಿದ್ದಿದೆ . ಇದು ಅತ್ಯಂತ ಕಳವಳಕಾರಿ ಎಂದು ರಘುರಾಮ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News