ಮಮತಾ ಬ್ಯಾನರ್ಜಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ
ಕೋಲ್ಕತ್ತಾ: ರಾಜಭವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕಾರಣಕ್ಕೆ ಅಲ್ಲಿಗೆ ಹೋಗಲೇ ನಮಗೆ ಹೆದರಿಕೆಯಾಗುತ್ತದೆ ಎಂದು ಮಹಿಳೆಯರು ನನಗೆ ದೂರು ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ಮರು ದಿನವಾದ ಶುಕ್ರವಾರದಂದು ಅವರ ವಿರುದ್ಧ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಪಾಲರು, ಸಾರ್ವಜನಿಕ ಪ್ರತಿನಿಧಿಗಳು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ತಪ್ಪು ಮತ್ತು ನಿಂದನಾತ್ಮಕ ಅನಿಸಿಕೆಯನ್ನು ಸೃಷ್ಟಿಸಬಾರದು ಎಂದು ಕಿಡಿ ಕಾರಿದರು. ಈ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ರಾಜ್ಯ ಕಾರ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಆಡಳಿತಾತ್ಮಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ಇತ್ತೀಚೆಗೆ ರಾಜಭವನದಲ್ಲಿ ನಡೆಯುತ್ತಿರುವ ಘಟನೆಗಳಿಂದ ಅಲ್ಲಿಗೆ ಹೋಗಲೇ ಹೆದರಿಕೆಯಾಗುತ್ತದೆ ಎಂದು ಮಹಿಳೆಯರು ನನಗೆ ಮಾಹಿತಿ ನೀಡಿದ್ದಾರೆ" ಎಂದು ಹೇಳಿದ್ದರು.