ಬಿಹಾರ: ಕಾಲಿನ ಮೂಳೆ ಮುರಿತಕ್ಕೊಳಗಾದ ವ್ಯಕ್ತಿಗೆ ಪ್ಲಾಸ್ಟರ್ ಕಾಸ್ಟ್ ಬದಲು ರಟ್ಟಿನ ಕಾಸ್ಟ್ ಅಳವಡಿಸಿದ ವೈದ್ಯರು!
ಪಾಟ್ನಾ: ಬಿಹಾರದ ಮುಝಫ್ಫರಪುರ್‌ನಲ್ಲಿ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಅಲ್ಲಿನ ಮಿನಾಪುರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾದ ವ್ಯಕ್ತಿಯ ಕಾಲಿಗೆ ರಟ್ಟಿನ ಕಾಸ್ಟ್ ಅನ್ನು ವೈದ್ಯರು ಅಳವಡಿಸಿದ ಘಟನೆ ನಡೆದಿದೆ. ನಂತರ ಆತನಿಗೆ ಇನ್ನೊಂದು ಆಸ್ಪತ್ರೆಗೆ ದಾಖಲಾಗಲು ಹೇಳಲಾಯಿತಾದರೂ ಅಲ್ಲಿನ ವೈದ್ಯರೂ ಆತನ ಕಾಲಿನಿಂದ ಕಾಸ್ಟ್ ತೆಗೆಯುವ ಗೋಜಿಗೆ ಹೋಗಿಲ್ಲ ಎಂದು ವರದಿಯಾಗಿದೆ.
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮುಕೇಶ್ ಕುಮಾರ್ ಎಂಬಾತ ಜೂನ್ 7ರಂದು ಮಿನಾಪುರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ. ಮೂಳೆ ಮುರಿತಕ್ಕೊಳಗಾದ ಸ್ಥಳದಲ್ಲಿ ರಟ್ಟಿನ ಕಾಸ್ಟ್ ಅಳವಡಿಸಲಾಗಿತ್ತು. ನಂತರ ಆತನನ್ನು ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಪ್ಲಾಸ್ಟರ್ ಕಾಸ್ಟ್ ಹಾಕುವ ಬದಲು ಹಿಂದಿನ ರಟ್ಟಿನ ಕಾಸ್ಟ್ ಅನ್ನು ಜೂನ್ 7ರಿಂದ 11ರ ತನಕ ಹಾಗೆಯೇ ಇರಿಸಿದ್ದರು.
ಸ್ಥಳೀಯ ಮಾಧ್ಯಮದಲ್ಲಿ ಇದು ಸುದ್ದಿಯಾದಾಗ ವೈದ್ಯರು ಸೂಕ್ತ ಚಿಕಿತ್ಸೆ ಒದಗಿಸಿ ಪ್ಲಾಸ್ಟರ್ ಕಾಸ್ಟ್ ಅಳವಡಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪ್ಲಾಸ್ಟರ್ ಕಾಸ್ಟ್ ಬದಲು ರಟ್ಟಿನ ಕಾಸ್ಟ್ ಯಾಕೆ ಅಳವಡಿಸಿದರು ಎಂಬ ಬಗ್ಗೆ ತನಿಖೆ ನಡೆಸಲಾಗುವುದೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.