ಬಿಹಾರ: ಅ.2ರಂದು ʼಜನ್ ಸೂರಜ್ʼ ಪಕ್ಷಕ್ಕೆ ಚಾಲನೆ ನೀಡಲಿರುವ ಪ್ರಶಾಂತ್ ಕಿಶೋರ್

Update: 2024-07-29 05:32 GMT

Photo: PTI

ಪಾಟ್ನಾ: ಅಕ್ಟೋಬರ್ 2, ಗಾಂಧಿ ಜಯಂತಿಯಂದು ಬಿಹಾರದಲ್ಲಿನ ತಮ್ಮ ಜನ್ ಸೂರಜ್ ಅಭಿಯಾನಕ್ಕೆ ರಾಜಕೀಯ ಪಕ್ಷವಾಗಿ ಚಾಲನೆ ನೀಡಲಾಗುವುದು ಎಂದು ರವಿವಾರ ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ ತಮ್ಮ ಜನ್ ಸೂರಜ್ 2025ರ ಬಿಹಾರ ವಿಧಾನಸಭೆಯಲ್ಲಿ ಸ್ಪರ್ಧಿಸಲಿರುವುದಾಗಿ ಪ್ರಶಾಂತ್ ಕಿಶೋರ್ ದೃಢಪಡಿಸಿದ್ದರು. ಈ ಕುರಿತು ಅವರು ಸಾರ್ವಜನಿಕವಾಗಿ ಹಲವು ಬಾರಿ ಸುಳಿವು ನೀಡಿದ್ದರು.

ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಜನ್ ಸೂರಜ್ ಅಭಿಯಾನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಪಕ್ಷದ ನಾಯಕತ್ವ ಸೇರಿದಂತೆ ಇನ್ನಿತರ ವಿವರಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ. ಶುಕ್ರವಾರ ರಚಿಸಲಾಗಿರುವ ಏಳು ಸದಸ್ಯರ ಸಮಿತಿಯು ಪಕ್ಷದ ಉನ್ನತ ಹುದ್ದೆಗಳಿಗೆ ಆಗಸ್ಟ್ 15ರಿಂದ ಆಗಸ್ಟ್ 20ರ ನಡುವೆ ಚುನಾವಣೆ ನಡೆಸಲಿದೆ ಎಂದೂ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.

ಪಕ್ಷದ ಸಂಘಟನೆಗೆ ತಲಾ 5,000 ಸದಸ್ಯರನ್ನು ಸೇರ್ಪಡೆ ಮಾಡಬಲ್ಲ ಸಾಮರ್ಥ್ಯ ಉಳ್ಳವರು ಪಕ್ಷದ ಅಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಅಕ್ಟೋಬರ್ 2, 2022ರಂದು ಪ್ರಾರಂಭಗೊಂಡಿದ್ದ ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಅಭಿಯಾನವು ರಾಜ್ಯಾದ್ಯಂತ ಸದ್ಯ ನಡೆಯುತ್ತಿರುವ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಈ ಅಭಿಯಾನವು ಶಿಕ್ಷಣ, ಆರೋಗ್ಯ ಸೇವೆ, ನಿರುದ್ಯೋಗ, ಬಿಹಾರದ ಜನತೆಯ ಸಮಪ್ರಮಾಣದ ಪಾಲುದಾರಿಕೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿಕೊಂಡಿತ್ತು.

2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಪ್ರಶಾಂತ್ ಕಿಶೋರ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಹುಮತದ ಮೇಲೆ ಅಧಿಕಾರಕ್ಕೆ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News