ಬಿಹಾರ: ಉಷ್ಣಾಘಾತ ಮೂವರು ಸಾವು
ಪಾಟ್ನಾ: ಬಿಹಾರದ ನಳಂದಾ ಜಿಲ್ಲೆಯಲ್ಲಿ ಉಷ್ಣಾಘಾತಕ್ಕೆ ಕಳೆದ 24 ಗಂಟೆಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಉಷ್ಣಾಘಾತದಿಂದ ಮೃತಪಟ್ಟವರನ್ನು ಲಕ್ಷ್ಮೀನಿ ದೇವಿ, ರಾಜೇಂದ್ರ ಲೊಹಾರ ಹಾಗೂ ಸೌಜಾ ದೇವಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಬುರ್ಬನ್ನಾ ಗ್ರಾಮದ ನಿವಾಸಿಯಾಗಿರುವ 55 ವರ್ಷದ ಲಕ್ಷ್ಮಿನಿ ದೇವಿ ವೈದ್ಯರನ್ನು ಭೇಟಿ ಮಾಡಲು ತೆರಳಿದ ಸಂದರ್ಭ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಕುಸಿದು ಬಿದ್ದರು. ಅವರನ್ನು ಪಾದಚಾರಿಗಳು ರಕ್ಷಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿಂದ ಅವರನ್ನು ಸದರ್ ಹಾಸ್ಟಿಟಲ್ ಬಿಹಾರ್ ಶರೀಫ್ ಗೆ ಕರೆದೊಯ್ಯಲು ಶಿಫಾರಸು ಮಾಡಲಾಗಿತ್ತು. ಸದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ಅವರು ಮೃತಪಟ್ಟರು.
ಜಾರ್ಖಂಡ್ ನ ಗುಮ್ಲಾ ನಿವಾಸಿಯಾಗಿರುವ ಲೊಹಾರ ಅವರು ಕಟ್ರು ಬಿಘಾ ಗ್ರಾಮದಲ್ಲಿ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಶುಕ್ರವಾರ ಉಷ್ಣಾಘಾತದಿಂದ ಮೃತಪಟ್ಟಿದ್ದಾರೆ. ಪರಸ್ ಸಿಂಗ್ ಅವರ ಪತ್ನಿಯಾಗಿರುವ ಸೌಜಾ ಅವರು ಮಾರುಕಟ್ಟೆಗೆ ತೆರಳಿದ ಸಂದರ್ಭ ಉಷ್ಣಾಘತದಿಂದ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.
ಸುಡುವ ಬಿಸಿ ಗಾಳಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜನರಿಗೆ ಮುನ್ನೆಚ್ಚರಿಕೆ ನೀಡಿದೆ. ತುರ್ತು ಕೆಲಸ ಇದ್ದರೆ ಮಾತ್ರ ಮನೆಯಿದ ಹೊರಗೆ ಹೋಗಿ ಎಂದು ಅದು ತಿಳಿಸಿದೆ.
ಜಿಲ್ಲೆಯಲ್ಲಿ ಶುಕ್ರವಾರ 47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.