"ಎಲ್ಲವನ್ನೂ ಕೇಸರೀಕರಣಗೊಳಿಸಲು ಬಿಜೆಪಿ ಪಿತೂರಿ": ಡಿಡಿ ಲೋಗೋ ಬದಲಾವಣೆಗೆ ಸ್ಟಾಲಿನ್ ಖಂಡನೆ

Update: 2024-04-21 09:25 GMT

 ಡಿಡಿ ಲೋಗೋ, ಎಂ.ಕೆ.ಸ್ಟಾಲಿನ್  | PC : PTI 

ಚೆನ್ನೈ: ದೂರದರ್ಶನದ ಲಾಂಛನವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸಿರುವ ನಡೆಯನ್ನು ರವಿವಾರ ಖಂಡಿಸಿರುವ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಇದು ಎಲ್ಲ ಕಡೆಯೂ ಕೇಸರಿಕರಣಗೊಳಿಸುವ ಬಿಜೆಪಿ ಪಿತೂರಿಯ ಮುನ್ನುಡಿಯಾಗಿದೆ ಎಂದು ಟೀಕಿಸಿದ್ದಾರೆ.

ದೂರದರ್ಶನದ ಲಾಂಛನಕ್ಕೆ ಕೇಸರಿ ಬಣ್ಣ ನೀಡಿರುವ ಕುರಿತು ಎಕ್ಸ್ ಸಾಮಾಜಿಕ ಮಾಧ್ಯ್ಮದಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, “ಎಲ್ಲವನ್ನೂ ಕೇಸರೀಕರಣಗೊಳಿಸುವ ಪಿತೂರಿ ಬಿಜೆಪಿಯಿಂದ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.

ಲಾಂಛನ ಬದಲಾವಣೆಯಂಥ ಈ ನಡೆಗಳು ಕೇಸರೀಕರಣಕ್ಕೆ ಮುನ್ನುಡಿಯಾಗಿವೆ. ಇಂತಹ ಫ್ಯಾಸಿಸಂ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ ಎಂಬುದನ್ನು 2024ರ ಲೋಕಸಭಾ ಚುನಾವಣಾ ಫಲಿತಾಂಶವು ನಿರೂಪಿಸಲಿದೆ” ಎಂದೂ ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಶ್ರೇಷ್ಠ ಕವಿ ತಿರುವಳ್ಳುವರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು ಎಂದು ಸ್ಮರಿಸಿರುವ ಅವರು, ತಮಿಳುನಾಡಿನಲ್ಲಿರುವ ಶ್ರೇಷ್ಠ ನಾಯಕರ ಪ್ರತಿಮೆಗಳ ಮೇಲೆ ಕೇಸರಿ ಬಣ್ಣವನ್ನು ಸುರಿಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಡಿಡಿ ಲಾಂಛನ ಬದಲಾವಣೆಯು ಭಾರಿ ಅಕ್ರಮವಾಗಿದ್ದು, ಇದು ಬಿಜೆಪಿ ಪಕ್ಷಪಾತತವನ್ನು ತೋರಿಸುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News