ಬಿಜೆಪಿ ಸರಕಾರದಿಂದ ಬುಡಕಟ್ಟು ಜನರನ್ನು ಕಾಡುಗಳಿಗೆ ಸೀಮಿತಗೊಳಿಸುವ ಯತ್ನ: ರಾಹುಲ್ ಗಾಂಧಿ

Update: 2023-08-13 17:00 GMT

ರಾಹುಲ್ ಗಾಂಧಿ.| Photo : PTI 

ವಯನಾಡ್: ಬುಡಕಟ್ಟು ಸಮುದಾಯಗಳನ್ನು ಅರಣ್ಯ ಪ್ರದೇಶಗಳಿಗೆ ಸೀಮಿತಗೊಳಿಸಲು ಕೇಂದ್ರದ ಬಿಜೆಪಿ ಸರಕಾರ ಯತ್ನಿಸುತ್ತಿದೆ ಹಾಗೂ ಅವರನ್ನು ಆದಿವಾಸಿಗಳೆಂದು ಕರೆಯುವ ಬದಲು ವನವಾಸಿಗಳೆಂದು ಹೇಳುವ ಮೂಲಕ ಅವರಿಗೆ ಭೂಮಿಯ ಮೂಲ ಒಡೆಯರೆಂಬ ಸ್ಥಾನಮಾನವನ್ನು ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಆಪಾದಿಸಿದ್ದಾರೆ.

ಸ್ವಕ್ಷೇತ್ರವಾದ ವಯನಾಡ್ನಲ್ಲಿ ರವಿವಾರ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು ಬುಡಕಟ್ಟು ಜನರನ್ನು ವನವಾಸಿಗಳೆಂದು ಕರೆಯುತ್ತಿರುವುದರ ಹಿಂದೆ ಬಿಜೆಪಿಯ ‘ವಿಕೃತ ತರ್ಕ’ವಿದೆ. ಇನ್ನೊಂದೆಡೆ ಮೋದಿ ಸರಕಾರವು ಆದಿವಾಸಿಗಳ ಅರಣ್ಯ ಭೂಮಿಯನ್ನು ಕಿತ್ತುಕೊಂಡು ಅದನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುತ್ತಿದೆಯೆಂದು ಆಪಾದಿಸಿದರು.

ವನವಾಸಿ ಶಬ್ಬವು ಇತಿಹಾಸದ ತಿರುಚುವಿಕೆಯಾಗಿದೆ ಹಾಗೂ ಬುಡಕಟ್ಟು ಸಮುದಾಯಗಳ ಸಂಪ್ರದಾಯಗಳು ಹಾಗೂ ದೇಶದೊಂದಿಗಿನ ಅವರ ಬಾಂಧವ್ಯದ ಮೇಲೆ ದಾಳಿ ನಡೆಯುತ್ತಿದೆ ಎಂದವರು ಹೇಳಿದರು.

‘‘ನಮ್ಮ ಪಾಲಿಗೆ (ಕಾಂಗ್ರೆಸ್) ನೀವು ಆದಿವಾಸಿಗಳು, ಈ ನೆಲದ ಮೂಲ ಒಡೆಯರು’. ಆದಿವಾಸಿಗಳಿಗೆ ಭೂಮಿ ಹಾಗೂ ಅರಣ್ಯದ ಹಕ್ಕುಗಳನ್ನು ನೀಡಬೇಕು. ಅವರಿಗೆ ಶಿಕ್ಷಣ, ಉದ್ಯೋಗ, ವೃತ್ತಿ ಸೇರಿಂತೆ ಎಲ್ಲಾ ರೀತಿಯ ಅವಕಾಶಗಲನ್ನು ದೊರಕಿಸಿಕೊಡಬೇಕು.ಆದಿವಾಸಿಗಳನ್ನು (ಬುಡಕಟ್ಟು ಜನರು) ನಿರ್ಬಂಧಿಸಕೂಡದು ಅಥವಾ ಶ್ರೇಣಿಕೃತಗೊಳಿಸಬಾರದು. ಇಡೀ ಭೂಮಿಯೇ ನಿಮಗಾಗಿ ತೆರೆದಿದೆ ’’.

ನಾವು ಜೀವಿಸುವ ಭೂಮಿಯ ಪರಿಸರದ ಬಗ್ಗೆ ಆದಿವಾಸಿಗಳು ವಿಶೇಷವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಆದರೆ ಆಧುನಿಕ ಸಮಾಜವು ಅರಣ್ಯಗಳನ್ನು ನಾಶಪಡಿಸಿ, ಪರಿಸರ ಮಾಲಿನ್ಯವನ್ನುಂಟು ಮಾಡಿವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ‘ಪರಿಸರ’ ಹಾಗೂ ‘ ಪರಿಸರ ಸಂರಕ್ಷಣೆ’ ಎಂಬ ಪದಗಳು ಈಗೀಗ ಹೆಚ್ಚು ಪ್ಯಾಶನ್ ಆಗ ಬಿಟ್ಟಿವೆ ಎಂದರು.

ಆದರೆ ಆದಿವಾಸಿಗಳು ಸಾವಿರಾರು ವರ್ಷಗಳಿಂದ ಪರಿಸರ ಸಂರಕ್ಷಣೆಯ ಬಗ್ಗೆ ಆದಿವಾಸಿಗಳು ಮಾತನಾಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರಿಂದ ಆಧುನಿಕ ಸಮಾಜ ಕಲಿಯುವುದು ಸಾಕಷ್ಟಿದೆ ಎಂದರು.

ರವಿವಾರ ಸಂಜೆ ಕೋಝಿಕ್ಕೋಡ್ಗೆ ತೆರಳಿದ ರಾಹಲ್ ಅವರು ಕೊಡೆನ್ಚೇರಿಯಲ್ಲಿರುವ ಸೈಂಟ್ ಜೋಸಫ್ ಹೈಸ್ಕೂಲ್ ಸಭಾಭವನದಲ್ಲಿ ಸಾಮುದಾಯಿಕ ಭಿನ್ನಸಾಮಥರ್ ನಿರ್ವಹಣಾ ಕೇಂದ್ರ (ಸಿಡಿಎಂಸಿ)ಕ್ಕೆ ಶಂಕುಸ್ಥಾಪನೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News