ಭಯೋತ್ಪಾದನೆಗೆ ಹಣಕಾಸು ಸಹಾಯ ಪ್ರಕರಣದ ಆರೋಪಿ ಬಿಜೆಪಿಗೆ ಸೇರ್ಪಡೆ: ಕೇಸರಿ ನಾಯಕರಿಂದ ಸನ್ಮಾನ !

Update: 2024-03-21 11:14 GMT

Photo:X/ @zoo_bear

ಲಕ್ನೋ: ಟೆರರ್‌ ಫಂಡಿಂಗ್‌ ಆರೋಪ ಎದುರಿಸುತ್ತಿರುವ ಸಂಜಯ್‌ ಸರೋಜ್‌ ನನ್ನು ಪಕ್ಷಕ್ಕೆ ಬಿಜೆಪಿ ಸೇರಿಸಿಕೊಂಡಿರುವುದು ಉತ್ತರ ಪ್ರದೇಶ ರಾಜಕಾರಣದಲ್ಲಿ ವಿವಾದ ಸೃಷ್ಟಿಸಿದ್ದು ಈ ವಿಚಾರ ಈಗ ಬಹುಚರ್ಚಿತವಾಗಿದೆ. ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್‌ ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯನ್ನು ಟೀಕಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಸಂಜಯ್‌ ಸರೋಜ್‌ ಭಾಗವಹಿಸಿರುವುದು ಹಾಗೂ ಬಿಜೆಪಿ ಸಂಸದ ಸಂಗಂ ಲಾಲ್‌ ಗುಪ್ತಾ ಆತನನ್ನು ಕಾರ್ಯಕ್ರಮದಲ್ಲಿ ಗೌರವಿಸಿರುವುದಕ್ಕೂ ಅವರು ಆಕ್ಷೇಪಿಸಿದ್ದಾರೆ.

ಈ ಕುರಿತು ಐಪಿ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. “ವೇದಿಕೆಯಲ್ಲಿ ಬಿಜೆಪಿ ಪಕ್ಷದ ಸಂಸದ ಸಂಗಂ ಲಾಲ್‌ ಗುಪ್ತಾ ಅವರು ಟೆರರ್‌ ಫಂಡಿಂಗ್‌ ಆರೋಪಿ ಸಂಜಯ್‌ ಸರೋಜ್‌ ನನ್ನು ಸನ್ಮಾನಿಸಿದ್ದಾರೆ. ಆತನನ್ನು ಬಿಜೆಪಿಗೆ ಸೇರ್ಪಡಿಸಲಾಗಿದೆ. ಎಲ್ಲಾ ಪಾಪಗಳು ಬಿಜೆಪಿ ವಾಷಿಂಗ್‌ ಮಷೀನಿನಲ್ಲಿ ಕಳೆದು ಹೋಗಿವೆ, ಜನರು ಎಲ್ಲವನ್ನೂ ನೋಡುತ್ತಿದ್ದಾರೆ,” ಎಂದು ಅವರು ಬರೆದಿದ್ದಾರೆ.

ಕಾರ್ಯಕ್ರಮದಲ್ಲಿ ಸರೋಜ್‌ ಗೆ ಬಿಜೆಪಿ ಸಂಸದ ಕೇಸರಿ ಶಾಲು ಹೊದೆಸಿ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.

ಸಂಜಯ್‌ ಸರೋಜ್‌ ಅವರನ್ನು ಉಗ್ರ ನಿಗ್ರಹ ಪಡೆ (ಎಟಿಎಸ್)‌ ಮಾರ್ಚ್‌ 2018ರಲ್ಲಿ ಟೆರರ್‌ ಫಂಡಿಂಗ್‌ ಪ್ರಕರಣದಲ್ಲಿ ಬಂಧಿಸಿತ್ತು. ಸರೋಜ್‌ ಮತ್ತು 10 ಮಂದಿ ಇತರರಿಗೆ ಎಲ್‌ಇಟಿ ನಂಟು ಇದೆ ಎಂದೂ ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ನಂತರ ಸರೋಜ್‌ ರಾಜಕಾರಣ ಪ್ರವೇಶಿಸಿದ್ದ. ಆತನ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.

ಸಮಾಜವಾದಿ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದ ಸಂಜಯ್ ಸರೋಜ್, ಪಂಚಾಯಿತಿ ಅಧ್ಯಕ್ಷ ಸ್ಥಾನದ ಟಿಕೆಟ್ ಗೆ ಪ್ರಯತ್ನಿಸಿದ್ದ. ಆದರೆ, ಆತನ ವಿರುದ್ಧ ಉಗ್ರಗಾಮಿಗಳಿಗೆ ನಿಧಿ ಒದಗಿಸಿದ ಆರೋಪ ಇದ್ದುದರಿಂದ ಪಕ್ಷವು ಆತನನ್ನು ದೂರವಿಟ್ಟಿತ್ತು. ನಂತರ ಚುನಾವಣೆಗೆ ಸ್ಪರ್ಧಿಸಿದ್ದ ಆತನ ಪತ್ನಿ ನೀಲಂ ಸರೋಜ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಅಧ್ಯಕ್ಷೆಯಾಗಿಯೂ ಚುನಾಯಿತರಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಂಗಮ್ ಲಾಲ್ ಗುಪ್ತಾ, ನೀಲಂ ಸರೋಜ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಜಯ್ ಸರೋಜ್ ಕೂಡಾ ಕೇಸರಿ ಶಾಲು ಧರಿಸುವಂತೆ ಮಾಡಿರಬಹುದು. ನನಗೆ ಸಂಜಯ್ ಸರೋಜ್ ಉಗ್ರಗಾಮಿಗಳಿಗೆ ನಿಧಿ ಒದಗಿಸಿರುವ ಆರೋಪದ ಕುರಿತು ಅರಿವಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News