ಚುನಾವಣೆಯಲ್ಲಿ ಜಯ ಗಳಿಸಲು ಬಿಜೆಪಿ ಪ್ರತಿಯೊಬ್ಬರನ್ನೂ ಜೈಲಿಗೆ ಹಾಕುತ್ತಿದೆ : ಮಮತಾ ಬ್ಯಾನರ್ಜಿ

Update: 2024-02-01 17:13 GMT

ಮಮತಾ ಬ್ಯಾನರ್ಜಿ| Photo: PTI 

ಶಾಂತಿಪುರ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಯ ಗಳಿಸಲು ಬಿಜೆಪಿ ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ಹಾಕುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಒಂದು ದಿನಗಳ ಬಳಿಕ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆ ನೀಡಿದ್ದಾರೆ.

ನಾಡಿಯಾ ಜಿಲ್ಲೆಯ ಶಾಂತಿಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ತನ್ನನ್ನು ಜೈಲಿಗೆ ಹಾಕಿದರೆ, ಅದರಿಂದ ಹೊರಗೆ ಬರುತ್ತೇನೆ ಎಂದರು.

‘‘ನೀವು ಬೆದರಿಸಬಹುದು ಹಾಗೂ ಪ್ರತಿಯೊಬ್ಬರನ್ನೂ ಜೈಲಿಗೆ ಹಾಕಬಹುದು. ನೀವು ನನ್ನನ್ನು ಕೂಡ ಜೈಲಿಗೆ ಹಾಕಬಹುದು. ಆದರೆ, ನಾನು ಖಂಡಿತವಾಗಿ ಹೊರಬರುತ್ತೇನೆ. ಚುನಾವಣೆಯಲ್ಲಿ ಜಯ ಗಳಿಸುವ ಒಂದೇ ಕಾರಣಕ್ಕೆ ಬಿಜೆಪಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ’’ ಎಂದು ಅವರು ಹೇಳಿದರು.

‘‘ನಾವು (ಪ್ರತಿಪಕ್ಷದ ನಾಯಕರು) ಎಲ್ಲರೂ ಕಳ್ಳರು ಹಾಗೂ ನೀವು (ಬಿಜೆಪಿ) ಸಾಧುಗಳು ಎಂದು ಭಾವಿಸಿದ್ದೀರಿ ನೀವು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿದಿರಿ. ರಸ್ತೆ ನಿರ್ಮಿಸಲು, ಗ್ರಾಮೀಣ ಆವಾಸ್ ಯೋಜನೆಗೆ ನಿಧಿ ಬಿಡುಗಡೆ ಮಾಡಲಿಲ್ಲ’’ ಎಂದು ಅವರು ಹೇಳಿದರು.

‘‘ಚುನಾವಣೆಗೆ ಮುನ್ನ ಎನ್ ಆರ್ ಸಿ ಯನ್ನು ಜಾರಿಗೊಳಿಸಲು ಬಿಜೆಪಿ ಯೋಜಿಸುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಇದು ಅವರ ರಾಜಕೀಯ ಆಟವಲ್ಲದೆ, ಬೇರೇನೂ ಅಲ್ಲ. ಅವರು ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News