ಅಬಕಾರಿ ನೀತಿ ಹಗರಣಕ್ಕೆ ಬಿಜೆಪಿ ಜವಾಬ್ದಾರಿ : ಸಂಜಯ್ ಸಿಂಗ್

Update: 2024-04-05 15:56 GMT

ಸಂಜಯ್ ಸಿಂಗ್ | Photo : PTI 

ಹೊಸದಿಲ್ಲಿ : ಅಬಕಾರಿ ನೀತಿ ಹಗರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲು ಬಿಜೆಪಿಯ ಹಿರಿಯ ನಾಯಕರು ಸಂಚು ರೂಪಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಶುಕ್ರವಾರ ಆರೋಪಿಸಿದ್ದಾರೆ.

ಜೈಲಿನಿಂದ ಬಿಡುಗಡೆಗೊಂಡ ಎರಡು ದಿನಗಳ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಆರೋಪಿ ರಾಘವ ಮುಗುಂಟಾ ಅವರು ಕೇಜ್ರಿವಾಲ್ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದಿದ್ದಾರೆ.

ರಾಘವ ಮಗುಂಟಾ ಅವರ ತಂದೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಗುಂಟಾ ಶ್ರೀನಿವಾಸುಲು ರೆಡ್ಡಿ ಅವರ ವಿರುದ್ಧ 2022 ಸೆಪ್ಟಂಬರ್ 16ರಂದು ಕ್ರಮ ತೆಗೆದುಕೊಳ್ಳಲಾಗಿತ್ತು. ಕೇಜ್ರಿವಾಲ್ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಅವರಿಗೆ ಒತ್ತಡ ಹೇರಲಾಗಿತ್ತು. ಆದರೆ, ಅವರು ನಿರಾಕರಿಸಿದಾಗ ಅವರ ಪುತ್ರ ರಾಘವ ರೆಡ್ಡಿ ಅವರನ್ನು ಬಂಧಿಸಲಾಯಿತು. ನಿರಂತರ ಪ್ರಶ್ನಿಸಿದ ಬಳಿಕ ರಾಘವ ರೆಡ್ಡಿ ಅವರು ಕೇಜ್ರಿವಾಲ್ ಕುರಿತ ತನ್ನ ಹೇಳಿಕೆಯನ್ನು ಬದಲಾಯಿಸಿದರು ಹಾಗೂ ಅತಿ ದೊಡ್ಡ ಪಿತೂರಿಯ ಭಾಗವಾದರು ಎಂದು ಸಿಂಗ್ ಆರೋಪಿಸಿದ್ದಾರೆ.

‘‘ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕಾರಾಗೃಹದಲ್ಲಿ ಹಾಕಲು ಅತಿ ದೊಡ್ಡ ಪಿತೂರಿ ನಡೆದಿದೆ. ಅಬಕಾರಿ ನೀತಿ ಹಗರಣಕ್ಕೆ ಬಿಜೆಪಿ ಹೊಣಗಾರ. ಬಿಜೆಪಿಯ ಹಿರಿಯ ನಾಯಕರು ಇದರಲ್ಲಿ ಪಾಲ್ಗೊಂಡಿದ್ದಾರೆ’’ ಎಂದು ಅವರು ಆರೋಪಿಸಿದ್ದಾರೆ.

ಕೇಜ್ರಿವಾಲ್ ಅವರು ಪ್ರಾಮಾಣಿಕ ನಾಯಕ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ದಿಲ್ಲಿ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಗುರಿಯನ್ನು ಅವರು ಹೊಂದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News