ಮಹಾರಾಷ್ಟ್ರ| ಮಹಿಮ್ ನಲ್ಲಿ ರಾಜ್ ಠಾಕ್ರೆ ಪುತ್ರನಿಗೆ ಬೆಂಬಲ; ಶಿಂಧೆ ಬಣದ ಶಿವಸೇನೆ ಅಭ್ಯರ್ಥಿಗೆ ಕೈ ಕೊಟ್ಟ ಬಿಜೆಪಿ

Update: 2024-11-01 06:06 GMT

Photo credit: PTI

ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಿಮ್ ವಿಧಾನಸಭಾ ಕ್ಷೇತ್ರದಲ್ಲಿ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿಯು, ತನ್ನ ಮಿತ್ರ ಪಕ್ಷ ಶಿವಸೇನೆ ಶಿಂಧೆ ಬಣದ ಹಾಲಿ ಶಾಸಕ ಸದಾ ಸರ್ವಾಂಕರ್ ಅವರಿಗೆ ಬೆಂಬಲ ನೀಡುವ ಬದಲು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ 20 ದಿನಗಳು ಬಾಕಿಯಿರುವಂತೆ, ರಾಜಕೀಯವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ.

ಮಹಿಮ್ ನಲ್ಲಿ ಎಂಎನ್‌ಎಸ್ ನ ಅಮಿತ್ ಠಾಕ್ರೆ, ಶಿವಸೇನೆಯ ಹಾಲಿ ಶಾಸಕ ಸದಾ ಸರ್ವಾಂಕರ್ ಮತ್ತು ಶಿವಸೇನೆಯ (ಯುಬಿಟಿ) ಮಹೇಶ್ ಸಾವಂತ್ ನಡುವೆ ತ್ರಿಕೋನ ಹಣಾಹಣಿಗೆ ಕ್ಷೇತ್ರ ಸಿದ್ಧವಾಗಿದೆ.

ಮಿತ್ರ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ತಮ್ಮ ಹಾಲಿ ಶಾಸಕರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಈ ಮಧ್ಯೆ ಬಿಜೆಪಿಯು ಅಮಿತ್ ಠಾಕ್ರೆಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ. ಈ ಎರಡೂ ಪಕ್ಷಗಳು ತಮ್ಮ ನಿರ್ಧಾರಕ್ಕೆ ಪಟ್ಟು ಹಿಡಿದು ನಿಂತಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನಲಾಗಿದೆ.

ಏಕನಾಥ್ ಶಿಂಧೆ ಅವರ ಶಿವಸೇನೆಯು ಅಮಿತ್ ಠಾಕ್ರೆಗೆ ಬೆಂಬಲ ನೀಡಿ ಶಾಸಕ ಸರ್ವಾಂಕರ್ ಅವರನ್ನು ಚುನಾವಣಾ ಕಣದಿಂದ ಹಿಂತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ನಿರೀಕ್ಷಿಸಿತ್ತು. ಈ ಬಗ್ಗೆ ಶಿಂಧೆ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಆದರೆ ಶಿಂಧೆ ಬಣ ಅಭ್ಯರ್ಥಿಯನ್ನು ನಿಲ್ಲಿಸದಿದ್ದರೆ, ಅವರ ಮತಗಳು ಉದ್ಧವ್ ಬಣಕ್ಕೆ ಹೋಗಬಹುದು ಎಂದು ಶಿವಸೇನೆ ನಾಯಕರು ಹೇಳಿದ್ದಾರೆ. ಹೀಗಾಗಿ ಸರ್ವಾಂಕರ್ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಮ್ ಕ್ಷೇತ್ರದಿಂದ ತಮ್ಮ ಮಗನ ನಾಮಪತ್ರ ಹಿಂಪಡೆದು ಶಿವಸೇನೆಗೆ ಬೆಂಬಲ ನೀಡುವಂತೆ ಸಾರ್ವಂಕರ್ ಅವರು ಬುಧವಾರ ರಾಜ್ ಠಾಕ್ರೆ ಅವರಿಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರವನ್ನು ಮಹಾಯುತಿ ಮೈತ್ರಿಕೂಟದ ನೇತೃತ್ವ ವಹಿಸಲಿದ್ದು, ಎಂಎನ್‌ಎಸ್ ಬೆಂಬಲದೊಂದಿಗೆ ಈ ಸರ್ಕಾರ ರಚನೆಯಾಗಲಿದೆ. ಮುಖ್ಯಮಂತ್ರಿ ಸ್ಥಾನ ಬಿಜೆಪಿ ಪಾಲಾಗಲಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ವಿಶೇಷವೆಂದರೆ, ರಾಜ್ ಠಾಕ್ರೆಯವರ ಪಕ್ಷವು ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟದ ಅಧಿಕೃತವಾಗಿ ಭಾಗವಾಗಿಲ್ಲ.

288 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News