ಅರುಣಾಚಲ ಪ್ರದೇಶದಲ್ಲಿ ಯುಸಿಸಿ ಜಾರಿಗೆ ಬಿಜೆಪಿಯ ಮಿತ್ರಪಕ್ಷ ಎನ್ಪಿಪಿ ವಿರೋಧ

Update: 2023-07-09 15:45 GMT

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC)ಯ ತಕ್ಷಣದ ಜಾರಿಯನ್ನು ವಿರೋಧಿಸಲು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP)ಯ ರಾಜ್ಯ ಘಟಕವು ನಿರ್ಧರಿಸಿದೆ. ಶನಿವಾರ ಇಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎನ್ಪಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಕಂಗ ಬಾಗೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಎನ್ಪಿಪಿ ಅಭಿವೃದ್ಧಿ ವಿಷಯಗಳ ಕುರಿತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆಯಾದರೂ ಅದು ತನ್ನದೇ ಆದ ಸಿದ್ಧಾಂತವನ್ನು ಅನುಸರಿಸುತ್ತದೆ ಎಂದು ಎನ್ಪಿಪಿಯ ರಾಜ್ಯ ಕಾರ್ಯಾಧ್ಯಕ್ಷ ಲಿಖಾ ಸಾಯಾ ಹೇಳಿದರು. ರಾಜ್ಯದ ಬಹು-ಜನಾಂಗೀಯ ಮತ್ತು ಬಹು-ಬುಡಕಟ್ಟು ಸಂಯೋಜನೆ ಹಾಗು ಅದರ ಪ್ರಬಲವಾದ ಸಾಂಪ್ರದಾಯಿಕ ಅನನ್ಯತೆಯನ್ನು ಉಲ್ಲೇಖಿಸಿ ಪಕ್ಷವು ಸಭೆಯಲ್ಲಿ ಯುಸಿಸಿಯನ್ನು ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿದೆ ಎಂದು ತಿಳಿಸಿದ ಬಾಗೆ, ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಕಾನೂನುಗಳನ್ನು ಬುಡಕಟ್ಟು ಪದ್ಧತಿಗಳೊಂದಿಗೆ ಸಮನ್ವಯಗೊಳಿಸಲು ಅಗತ್ಯ ಮಾರ್ಪಾಡುಗಳೊಂದಿಗೆ ಅವುಗಳ ಕ್ರೋಡೀಕರಣಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.

ಎನ್ಪಿಪಿಯು ಜಾತ್ಯತೀತ ಪಕ್ಷವಾಗಿದೆ ಮತ್ತು ಯಾವುದೇ ವ್ಯಕ್ತಿ ಅಥವಾ ಧಾರ್ಮಿಕ ಗುಂಪಿನ ವಿರುದ್ಧ ಯಾವುದೇ ಪೂರ್ವಾಗ್ರಹವನ್ನು ಹೊಂದಿಲ್ಲ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಖಚಿತಪಡಿಸುವುದು ಅದರ ಏಕೈಕ ಗುರಿಯಾಗಿದೆ ಎಂದು ಸಾಯಾ ಹೇಳಿದರು. 60 ಸದಸ್ಯಬಲದ ಅರುಣಾಚಲ ವಿಧಾನಸಭೆಯಲ್ಲಿ ಎನ್ಪಿಪಿ ನಾಲ್ವರು ಶಾಸಕರನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News